ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ ಡಿವಿಜಿ

DVG
ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರಸ್ವಾಮಿ ವಿರಕ್ತಮಠದಲ್ಲಿ ಮಾಸಿಕ ಶಿವಾನುಭವ, ಏಕೀಕರಣ ಯೋಧರ ಯಶೋಗಾಥೆ-16ರ ಸಮಾರಂಭ ಜರುಗಿತು. ಶಿಕ್ಷಕ ಸುರೇಶ ಬನ್ನಿಗಿಡದ, ವೀರಯ್ಯನವರ ಸಾಲಿಮಠ, ಶಿವಯ್ಯನವರ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಅಣ್ಣಿಗೇರಿ ಇತರರಿದ್ದರು.
Published on

ನರಗುಂದ: ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಆಧುನಿಕ ಕನ್ನಡ ಸಾಹಿತ್ಯದ ಅದ್ವೈತ ಕವಿ ಡಿ.ವಿ.ಗುಂಡಪ್ಪನವರು ಕನ್ನಡ ಸಾರಸ್ವತಲೋಕದ ಅನರ್ಘ್ಯರತ್ನ. 1907ರಲ್ಲಿ ಭಾರತಿ ಎಂಬ ಪತ್ರಿಕೆ ಆರಂಭಿಸಿ ಪತ್ರಿಕೋದ್ಯಮದಲ್ಲಿ ಅದ್ವಿತಿಯ ಕೊಡುಗೆ ನೀಡಿದ್ದಾರೆ.

ಮಂಕುತಿಮ್ಮನ ಕಗ್ಗ ಎನ್ನುವ ಮಹಾನ್ ಗ್ರಂಥವನ್ನು ನೀಡಿದ ಮಹಾ ಕವಿಯಾಗಿದ್ದಾರೆ ಎಂದು ಶಿಕ್ಷಕ ಸುರೇಶ ಬನ್ನಿಗಿಡದ ಬಣ್ಣಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 360ನೇ ಮಾಸಿಕ ಶಿವಾನುಭವ ಹಾಗೂ ಏಕೀಕರಣ ಯೋಧರ ಯಶೋಗಾಥೆ-16ರ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹುಮುಖ ಪ್ರತಿಭೆಯಾಗಿದ್ದ ಗುಂಡಪ್ಪನವರು ಕನ್ನಡ ನಾಡು ನುಡಿಗೆ ಸಾಹಿತ್ಯದ ಮೂಲಕವಷ್ಟೆ ಅಲ್ಲದೆ ಸಾರ್ವಜನಿಕವಾಗಿಯೂ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಗದ್ಯ, ಪದ್ಯ ಮತ್ತು ಗೀತ ಈ ಮೂರರಲ್ಲಿಯೂ ಗುಂಡಪ್ಪನವರು ಗಣನೀಯವಾದ ಸೇವೆಯನ್ನು ಸಲ್ಲಿಸಿದ್ದಾರೆ ಅವರನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ ಎಂದರು.

ಶಿರೋಳದ ಯೋಗ ಶಿಕ್ಷಕ ಸುನೀಲ ಕಳಸದ ಮಾತನಾಡಿ, ಡಿ.ವಿ.ಗುಂಡಪ್ಪನವರ ಸಾಹಿತ್ಯದಲ್ಲಿ ಆದರ್ಶಗಳ ಹೂರಣವಿದೆ. ಅದನ್ನು ಸವಿದವರು ಜೀವನದಲ್ಲಿ ಮೌಲ್ಯಯುತ ವ್ಯಕ್ತಿಗಳಾಗಿ ಬದುಕಬಲ್ಲರು. ಕನ್ನಡ ಸಾಹಿತ್ಯ ಎಲ್ಲ ಮಜಲುಗಳನ್ನು ಅರಿತವರಾಗಿದ್ದ ಗುಂಡಪ್ಪನವರು ಮಂಕು ತಿಮ್ಮನ ಕಗ್ಗವೆಂಬ ಚೌಪದಿ ಸಾಹಿತ್ಯವನ್ನು ರಚಿಸಿ ಆಧುನಿಕ ಸರ್ವಜ್ಞ ಎಂದು ಪ್ರಸಿದ್ಧರಾಗಿದ್ದಾರೆ. 1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ದೀರ್ಘ ಬಾಷಣ ಮಾಡುವ ಮೂಲಕ ಕನ್ನಡಿಗರನ್ನು ಎಚ್ಚರಿಸಿದ್ದರು ಎಂದು ತಿಳಿಸಿದರು.

ವೀರಯ್ಯನವರ ಸಾಲಿಮಠ, ಶಿವಯ್ಯನವರ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಅಣ್ಣಿಗೇರಿ, ಹಿರಿಯ ಕಲಾವಿದ ಪ್ರೊ. ಆರ್.ಬಿ. ಚಿನಿವಾಲರ, ಶಿಕ್ಷಕ ಡಿ.ವಿ. ಗದ್ದನಕೇರಿ, ಮೈಲಾರಿ ಮೊರಬದ ಇತರರಿದ್ದರು. ಮಹಾಂತೇಶ ಹೀರೆಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net