

ದಾವಣಗೆರೆ : ಕನ್ನಡದ ಮೇರು ನಟಿ ಡಾ. ಬಿ. ಸರೋಜಾ ದೇವಿ ಅವರು 90 ರ ದಶಕದಲ್ಲಿ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ್ದರು. 1996 ರ ಮಾ. 23, 24, 25 ರಂದು ನಡೆದ ಅಖಿಲ ಕರ್ನಾಟಕ ವೃತ್ತಿ ರಂಗಭೂಮಿ ಕಲಾವಿದರ ಪ್ರಥಮ ಸಮ್ಮೇಳನದಲ್ಲಿ ವರನಟ ಡಾ. ರಾಜಕುಮಾರ್ ಅವರೊಂದಿಗೆ ಪಾಲ್ಗೊಂಡಿದ್ದರು. ಕಲಾವಿದರ ಬದುಕು, ಸೇವೆಯ ಬಗ್ಗೆ ಅವರು ಅಂದಿನ ಸಮಾರಂಭದಲ್ಲಿ ಮಾತನಾಡಿದ್ದರು. ಅದೇ ವೇದಿಕೆಯಲ್ಲಿ ಸರೋಜಾ ದೇವಿ ಅವರನ್ನು ಡಾ. ರಾಜಕುಮಾರ್ ಸನ್ಮಾನಿಸಿದ್ದರು. ಪಾರ್ವತಮ್ಮ ರಾಜಕುಮಾರ್, ಹಿರಿಯ ಕಲಾವಿದೆ ಚಿಂದೋಡಿ ಲೀಲಾ, ಶಾಮನೂರು ಶಿವಶಂಕರಪ್ಪ, ಡಾ ಸದ್ಯೋಜಾತ ಸ್ವಾಮೀಜಿ ಭಾಗವಹಿಸಿದ್ದರು. ಸಮಾರಂಭದ ನಂತರ ಸರೋಜಾದೇವಿ ಅವರು ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅಂದಿನ ಅವರ ಕಾರ್ಯಕ್ರಮಗಳ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದನ್ನು ಹಿರಿಯ ಛಾಯಾಗ್ರಾಹಕ ಡಾ. ಎಚ್.ಬಿ. ಮಂಜುನಾಥ್ ಸ್ಮರಿಸಿಕೊಂಡರು. ಬಿ. ಸರೋಜಾದೇವಿ ಅವರಿಗೆ ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ಸೀರೆ, ಅರಿಷಿಣ ಕುಂಕುಮ ನೀಡಿ ಗೌರವಿಸಲಾಗಿತ್ತು ಎಂದು, ಆಗ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಬಾಮ ಬಸವರಾಜಯ್ಯ ನೆನಪು ಮಾಡಿಕೊಂಡರು.