ರಾಜ್ಯದಲ್ಲಿ 28 ಸ್ಥಾನದಲ್ಲೂ ಬಿಜೆಪಿ ಜಯಭೇರಿ ಕುಕ್ಕೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿಕೆ

SUB-NOV-03-01
Published on

ಮಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೀಗ ಜೆಡಿಎಸ್ ಕೂಡ ಎನ್‌ಡಿಎ ಜತೆಯಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28ರಲ್ಲಿ 28 ಸ್ಥಾನಗಳನ್ನು ಎನ್‌ಡಿಎ ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡದನ್ನು ಬಡ್ಡಿ ಸಮೇತ ಪಡೆದುಕೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸರ್ಪಸಂಸ್ಕಾರ ಸೇವೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಯಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತೂವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ ಎಂದರು.


ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ಎಂಎಲ್‌ಎ, ಎಂಪಿ, ಎಂಎಲ್ಸಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ ಸೇರಿದಂತೆ ಪಕ್ಷದಲ್ಲಿ ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ಇನ್ನು ನಾನು ಏನಾದರೂ ಪಕ್ಷಕ್ಕೆ ನೀಡುವುದು ಪ್ರಮುಖವಾಗಿದೆ. ಆದ್ದರಿಂದ ಪಕ್ಷಕ್ಕೆ ಕೊಡುಗೆ ನೀಡುವುದು ನನ್ನ ಪ್ರಧಾನ ಆದ್ಯತೆಯಾಗಿದೆ. ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು.


ರಾಜ್ಯ ಕಾಂಗ್ರೆಸ್‌ನ ಬಾಳ್ವಿಕೆ ಕಡಿಮೆ:
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಆಂತರಿಕ ಕಚ್ಚಾಟ ಆರಂಭಗೊಂಡಿದೆ. ಪಕ್ಷದ ಶಾಸಕರು, ಸಚಿವರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮನೆಯೊಂದು ಮೂರು ಬಾಗಿಲಿನಂತಿದೆ. ರಾಜ್ಯದ ಜನರೇ ರಾಜ್ಯದ ಕಾಂಗ್ರೆಸ್ ಸರ್ಕಾರ ಹೆಚ್ಚು ಸಮಯ ಬಾಳ್ವಿಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಈ ಹಿಂದಿನಿಂದಲೂ ಅಲ್ಪಸಂಖ್ಯಾಕರ ಓಲೈಕೆ ಮಾಡುತ್ತಲೇ ಬಂದಿದೆ. ಅದನ್ನು ಇಂದೂ ಮುಂದುವರಿಸುತ್ತಿದೆ ಎಂದರು.


ಬಿಜೆಪಿಗೆ ಹಿನ್ನಡೆಯಿಲ್ಲ:
ದ.ಕ.ದಲ್ಲಿ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.


ವರದಿ ಜಾರಿಗೆ ವಿರೋಧ:
ಕಸ್ತೂರಿರಂಗನ್ ವರದಿಯನ್ನು ಈ ಭಾಗದಲ್ಲಿ ಅನುಷ್ಠಾನ ಮಾಡುವುದನ್ನು ನಾನು ಈ ಹಿಂದಿನಿಂದಲೂ ವಿರೋಧಿಸಿದ್ದೇನೆ. ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದ್ದರಿಂದ ಈ ಭಾಗದ ಅಡಕೆ, ರಬ್ಬರ್ ಕೃಷಿ ಪ್ರದೇಶವನ್ನೂ ಅರಣ್ಯ ಎಂದು ಕಸ್ತೂರಿ ರಂಗನ್ ವರದಿಗೆ ಸೇರಿಸಲಾಗಿದೆ. ಈ ಹಿಂದೆ ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರಧಾನಿಗೂ ಒತ್ತಡ ಹಾಕಿದ್ದೇವು ಎಂದ ಅವರು, ಇದಕ್ಕೆ ಬದಲಿ ವ್ಯವಸ್ಥೆ ನೋಡುವ ಅಗತ್ಯ ಇದೆ ಎಂದರು.


ಅಡಕೆ ಬೆಳೆಗಾರರ ರಕ್ಷಣೆ:
ಅಡಕೆ ಬೆಳೆಗಾರರ ಬಗ್ಗೆ ನಾನು ತಿಳಿದವನು. ಅಡಕೆ ಬೆಳೆಗಾರರ ಹಿತ ಕಾಯಲು ನಾನು ಸದಾ ಬದ್ಧನಾಗಿದ್ದೇನೆ. ಈವರೆಗೂ ಅದನ್ನು ಮಾಡಿದ್ದೇನೆ. ಅಡಕೆ ಬೆಲೆ ಕುಸಿತ, ಕಳ್ಳ ಸಾಗಾಟ ತಡೆಗೆ ಪೂರಕ ಕ್ರಮಕೈಗೊಂಡಿದ್ದೇನೆ. ಅಡಕೆ ಹಳದಿ ರೋಗಕ್ಕೆ ನಮ್ಮ ಸರ್ಕಾರ 25 ಕೋಟಿ ರೂ. ಅನುದಾನ ಇರಿಸಿ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮುಂದಾಗಿತ್ತು. ರೋಗ ಬಾರದ ತಳಿ ಅಭಿವೃದ್ಧಿ, ಇತರ ಪೂರಕ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಳ್ಳುವ ಮೂಲಕ ಬೆಳೆಗಾರರ ಜತೆ ಕೈಜೋಡಿಸಿದ್ದೇವೆ ಎಂದರು.


ಸರ್ಪಸಂಸ್ಕಾರ ಸೇವೆ:
ಡಿ.ವಿ.ಸದಾನಂದ ಗೌಡ ಅವರು ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಕ್ಷೇತ್ರದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಕುಟುಂಬಸ್ಥರು ಆಗಮಿಸಿದ್ದರು. ದೇವಳದ ವತಿಯಿಂದ ಡಿ.ವಿ.ಸದಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net