ಕ್ಯಾಂಪ್ಕೋ 53ನೇ ಸ್ಥಾಪನಾ ದಿನಾಚರಣೆ ಡಿ.ವಿ.ಸದಾನಂದ ಗೌಡ ಉದ್ಘಾಟನೆ

ಕ್ಯಾಂಪ್ಕೋ 53ನೇ ಸ್ಥಾಪನಾ ದಿನಾಚರಣೆ ಡಿ.ವಿ.ಸದಾನಂದ ಗೌಡ  ಉದ್ಘಾಟಿಸಿದರು. ಎಸ್.ಆರ್.ಸತೀಶ್ಚಂದ್ರ, ಕಿಶೋರ್ ಕುಮಾರ್ ಕೋಡ್ಗಿ, ಡಾ.ಬಿ.ವಿ.ಸತ್ಯನಾರಾಯಣ, ಪದ್ಮರಾಜ್ ಪಟ್ಟಾಜೆ ಇದ್ದರು.
ಕ್ಯಾಂಪ್ಕೋ 53ನೇ ಸ್ಥಾಪನಾ ದಿನಾಚರಣೆ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಎಸ್.ಆರ್.ಸತೀಶ್ಚಂದ್ರ, ಕಿಶೋರ್ ಕುಮಾರ್ ಕೋಡ್ಗಿ, ಡಾ.ಬಿ.ವಿ.ಸತ್ಯನಾರಾಯಣ, ಪದ್ಮರಾಜ್ ಪಟ್ಟಾಜೆ ಇದ್ದರು.
Published on
ಮಂಗಳೂರು: ಅಡಿಕೆ ತೋಟಗಳಿಗೆ ಬಾಧಿಸಿರುವ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹಾಗೂ ಕೊಳೆ ರೋಗ ನಿವಾರಣೆಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ ಕ್ಯಾಂಪ್ಕೋ ಸಂಸ್ಥೆ ಸಂಶೋಧನಾತ್ಮಕ ಕ್ರಮಗಳಿಗೆ ಇನ್ನಷ್ಟು ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಂದರ್ಭ ಶನಿವಾರ ನಡೆದ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 53ನೇ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಾಜಪೇಯಿ ಅವಧಿಯಿಂದ ತೊಡಗಿ ಪ್ರಧಾನಿ ನರೇಂದ್ರ ಮೋದಿ ಅವಧಿವರೆಗೆ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ಗುಣಮಟ್ಟದ ಹೆಸರಿನಲ್ಲಿ ಕರ್ನಾಟಕದ ಅಡಿಕೆ ಸಾಗಾಟ ಕಂಟೈನರ್‌ಗಳಿಗೆ ಮಹಾರಾಷ್ಟ್ರದಲ್ಲಿ ತಡೆ ಒಡ್ಡುವುದನ್ನು ನಿಲ್ಲಿಸುವಂತೆ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿರುವುದು ಫಲಪ್ರದವಾಗಿದೆ ಎಂದರು.
ವಾರಣಾಶಿ ಸುಬ್ರಾಯ ಭಟ್ಟರ ದೂರದೃಷ್ಟಿಯ ಚಿಂತನೆ, ಪೂರಕ ಜೋಡಣೆ, ಯಶಸ್ವಿ ಅನುಷ್ಠಾನ, ಫಲಿತಾಂಶದ ಪರಿಶೀಲನೆ ಕ್ಯಾಂಪ್ಕೋ ಸಂಸ್ಥೆ ನಿರ್ಮಾಣದ ಮೈಲುಗಲ್ಲು ಆಗಿತ್ತು. ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು ಸ್ಥಾಪಿಸಿದ ಕ್ಯಾಂಪ್ಕೋ ಕೃಷಿಕರ ಬಾಳು ಬೆಳಗುವಂತೆ ಮಾಡಿದೆ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.
ಕ್ಯಾಂಪ್ಕೋ ಆ್ಯಪ್‌ಗೆ ಚಾಲನೆ
ಬೆಳೆಗಾರರ ಮಿತ್ರ ಕ್ಯಾಂಪ್ಕೋ ಆ್ಯಪ್‌ಗೆ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು. ಕ್ಯಾಂಪ್ಕೋ ಹೊರತಂದ ಆ್ಯಪ್ ಬೆಳೆಗಾರ ಸದಸ್ಯರಿಗೆ ಎಲ್ಲ ರೀತಿಯ ಮಾಹಿತಿಯನ್ನು ನೀಡಲಿದೆ. ಕೋಕೋ ಬೆಳೆಗಾರರ ಹಿತಾಸಕ್ತಿ ಕಾಪಾಡುವ ದಿಶೆಯಲ್ಲಿ ಮಾರುಕಟ್ಟೆ ಧಾರಣೆ ಏರಿಕೆಯಾದರೆ, ಅದೇ ಧಾರಣೆಯನ್ನು ಕೋಕೋ ಬೆಳೆಗಾರರಿಗೆ ನೀಡಲು ಮುಂದಾಗಬೇಕು ಎಂದರು.
ರಸ್ತೆಗೆ ವಾರಣಾಸಿ ಹೆಸರಿಡಬೇಕು
ಸ್ಥಾಪನಾ ದಿನಾಚರಣೆ ಕುರಿತು ಭಾಷಣ ಮಾಡಿದ ಪ್ರಗತಿಪರ ಕೃಷಿಕ, ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ, ಅಡಿಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಕ್ಯಾಂಪ್ಕೋ ಹಾಗೂ ಚಾಕಲೇಟ್ ಕಾರ್ಖಾನೆ ಸ್ಥಾಪಿಸಿದ ವಾರಣಾಸಿ ಸುಬ್ರಾಯ ಭಟ್ಟರ ದೂರದೃಷ್ಟಿ, ಅವರ ಕಾರ್ಯದಕ್ಷತೆ, ಶಿಸ್ತು, ಸಂಯಮ, ನಡವಳಿಕೆಗಳು ಎಲ್ಲರಿಗೂ ಮಾದರಿ. ಬಂಟ್ವಾಳ ತಾಲೂಕಿನ ಸಾರಡ್ಕ-ಪರಿಯಾಲ್ತಡ್ಕ ರಸ್ತೆಗೆ ವಾರಣಾಸಿ ಸುಬ್ರಾಯ ಭಟ್ಟರ ಹೆಸರು ಇರಿಸಬೇಕು. ಅಡ್ಯನಡ್ಕದಲ್ಲಿ ಪ್ರೀಮಿಯರ್ ಕ್ಯಾಂಪ್ಕೋ ಶಾಖೆ ತೆರೆಯಬೇಕು. ಇನ್ನಷ್ಟು ಮೌಲ್ಯವರ್ಧಿತ ಚಾಕಲೇಟ್ ಮಾರುಕಟ್ಟೆಗೆ ಬರಬೇಕು, ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಸಂಶೋಧನೆ ನಡೆಯಬೇಕು ಎಂದರು.
ಕೇಶವ ಅಮೈಗೆ ಸನ್ಮಾನ: ಅಲ್ಯುಮೀನಿಯಂ ಏಣಿಯೇ ಮೊದಲಾದ ಕೃಷಿಕರ ಉಪಕರಣ ತಯಾರಿಸಿದ ಪ್ರಗತಿಪರ ಕೃಷಿಕ, ಉದ್ಯಮಿ ಪುತ್ತೂರು ಎಸ್‌ಆರ್‌ಕೆ ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. ಕೃಷಿಕರ ಸಮಸ್ಯೆ ನಿವಾರಿಸುವ ಉತ್ಪನ್ನವನ್ನು ನಾನು ತಯಾರಿಸಿದ್ದು, ಅದನ್ನು ಕೃಷಿಕರಿಗೇ ಮಾರಾಟ ಮಾಡುತ್ತಿದ್ದೇನೆ. ನನಗೆ ಸಂದ ಸನ್ಮಾನವನ್ನು ಕೃಷಿಕರಿಗೆ ಅರ್ಪಿಸುತ್ತಿದ್ದೇನೆ ಎಂದರು.
ಮೊಬೈಲ್ ಆ್ಯಪ್ ತಯಾರಿಸಿದ ಸಂದೀಪ್ ಭಕ್ತ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅತ್ಯುತ್ತಮ ಶಾಖಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಿಬ್ಬಂದಿಗಳ ಸಾಧಕ ಮಕ್ಕಳನ್ನು ಪುರಸ್ಕರಿಸಲಾಯಿತು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ವಂದಿಸಿದರು.
ಎಐ ಮೂಲಕ ಸಮಸ್ಯೆಗೆ ಸ್ಪಂದನೆ ಎಸ್.ಆರ್.ಸತೀಶ್ಚಂದ್ರ
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಗುಜರಾತ್‌ನ ಅಮೂಲ್ ಮಾದರಿಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆ, ಪ್ರಶ್ನೆಗಳಿಗೆ ಸ್ಪಂದಿಸಲು ಕೃತಕ ಬುದ್ಧಿಮತ್ತೆ(ಎಐ) ನೆರವಿನ ತಾಂತ್ರಿಕತೆಯನ್ನು ಬಳಕೆ ಮಾಡಲು ಕ್ಯಾಂಪ್ಕೋ ಚಿಂತನೆ ನಡೆಸುತ್ತಿದೆ. ಕ್ಯಾಂಪ್ಕೋ ಚಾಕಲೇಟನ್ನು ಮೆಲ್ದರ್ಜೆಗೇರಿಸಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರಿಗೆ ಮರಣೋತ್ತರವಾದರೂ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಹಾಗೂ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವ ಸಿಗಬೇಕು. ಇದರಿಂದ ಸಮಸ್ತ ಅಡಿಕೆ ಬೆಳೆಗಾರರಿಗೆ ದೊಡ್ಡ ಗೌರವ ಸಿಕ್ಕಿದಂತಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net