

ನಾಗಮಂಗಲ: ಜಿಲ್ಲಾದ್ಯಾಂತ ಈಗಾಗಲೇ ಭತ್ತ, ರಾಗಿ ಖರೀದಿ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಇಂದಿನಿಂದಲೇ ನೋಂದಣಿ ಪ್ರಾರಂಭಿಸುವಂತೆ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣಕ್ಕೆ ಗುರುವಾರ ಜಿಲ್ಲಾಧಿಕಾರಿ ಭೇಟಿ ನೀಡಿ ನೋಂದಣಿ ಕೇಂದ್ರದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು.
ನೋಂದಣಿಗೆ ಅಗತ್ಯವಿರುವ ಒಂದು ಕಂಪ್ಯೂಟರ್ ಸಂಪರ್ಕದ ಜತೆಯಲ್ಲಿ ಲೆಡ್ಜರ್ ಪುಸ್ತಕದಂತಹ ಯಾವುದೇ ಸಿದ್ಧತೆ ಇಲ್ಲದಿರುವುದು ಜಿಲ್ಲಾಧಿಕಾರಿ ಅಸಮಾಧಾನಕ್ಕೆ ಕಾರಣವಾಯಿತು.
ಸಂಬಂಧಿಸಿದ ಕೃಷಿ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಹಾಗೂ ಮಾಹಿತಿ ನೀಡುವಂತೆ ಸೂಚಿಸಿದರು.
ಖರೀದಿ ಕೇಂದ್ರಕ್ಕೆ ಅಗತ್ಯವಿರುವ ಸಹಕಾರ ನೀಡುವಂತೆ ಮಾರುಕಟ್ಟೆಯ ಕಾರ್ಯದರ್ಶಿಗಳಿಗೆ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪ್ರಸ್ತುತ ತಾಲೂಕಿನ ಕಸಬಾ ಮತ್ತು ಬೆಳ್ಳೂರು ಹೋಬಳಿ ಕೇಂದ್ರಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾನ್ಯ ಗುಣಮಟ್ಟದ ಭತ್ತ ಕ್ವಿಂಟಾಲ್‌ಗೆ 1815 ರೂ., ಗ್ರೇಡ್-ಎಗೆ 1835 ರೂ., ರಾಗಿ ಕ್ವಿಂಟಾಲ್‌ಗೆ 3150 ರೂ.ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.
ದಲ್ಲಾಳಿಗಳ ಹಾವಳಿ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ರೈತರೆ ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಕನಿಷ್ಠ ಸರಳ ದಾಖಲಾತಿಗಳನ್ನು ಕೇಳಲಾಗಿದೆ. ಮಾರಾಟ ಮಾಡಿದ ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗುವುದು. ಇಂದಿನಿಂದಲೇ ನೋಂದಣಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಖರೀದಿ ಕೇಂದ್ರದ ಪರಿಶೀಲನೆ ಮಾಡಲಾಗಿದೆ ಎಂದರು.
ಪ್ರವಾಸಿ ತಾಣಗಳಿಗೆ ಭೇಟಿ: ತಾಲ್ಲೂಕಿನ ಪ್ರವಾಸಿ ತಾಣಗಳಾದ ಕೋಟೆಬೆಟ್ಟ ಮತ್ತು ಹಾಲ್ತಿಯ ಶ್ರೀ ಆದಿಚುಂಚನಗಿರಿ ಶಾಖಾ ಮಠಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಾಗಿ ಪರಿಶೀಲನೆ ನಡೆಸಿದರು. ಕೋಟೆಬೆಟ್ಟಕ್ಕೆ ಭೇಟಿ ನೀಡಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅವಶ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗಿರುವ ಪ್ರವಾಸಿ ಮಂದಿರವನ್ನು ವೀಕ್ಷಿಸಿದರು. ನಂತರ ಹಾಲತಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಹಾಗೂ ಹಾಲತಿ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಸೋಮೇಶ್ವರನಾಥಸ್ವಾಮೀಜಿ ಆಶೀರ್ವಾದ ಪಡೆದರು.
ಎಪಿಎಂಸಿ ಅಧ್ಯಕ್ಷ ಕೆ.ಮಲ್ಲೇನಹಳ್ಳಿ ಚನ್ನಪ್ಪ, ಉಪಾಧ್ಯಕ್ಷ ಕೃಷ್ಣೇಗೌಡ, ಎಪಿಎಂಸಿ ಕಾರ್ಯದರ್ಶಿ ರಘು, ಆಹಾರ ಇಲಾಖೆ ಶಿರಸ್ತೇದಾರ್ ಪ್ರಕಾಶ್, ಕೃಷಿ ಅಧಿಕಾರಿ ಮಂಜುನಾಥ್, ಆಹಾರ ಇಲಾಖೆ ನಿರೀಕ್ಷಕಿ ಮೀನಾಕ್ಷಿ ಇದ್ದರು.