

ಚಿಕ್ಕಮಗಳೂರು: ಮನೆ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಂಡರೆ ಊರು ಸ್ವಚ್ಛವಾಗಿರುತ್ತದೆ. ಊರು ಸ್ವಚ್ಛವಾದರೆ ದೇಶ ಸ್ವಚ್ಛವಾಗಿ ಆರೋಗ್ಯವಂತ ಸಮಾಜ ಸೃಷ್ಟಿಯಾಗುತ್ತದೆ. ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ನಗರಸಭೆ ಆವರಣದಲ್ಲಿ ಶುಕ್ರವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರಿಗೆ ಸ್ವಚ್ಛತೆ ಅರಿವು ಮೂಡಿಸುವ ವಾಕಥಾನ್ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಕರೊನಾ ತಡೆಗೆ ಸರ್ಕಾರದ ನಿಯಮ ಪಾಲಿಸಬೇಕು ಎಂದರು. ಪೌರ ಕಾರ್ಮಿಕರನ್ನು ಒಳಗೊಂಡಂತೆ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸ್ವಚ್ಛತೆ ಅರಿವು ಮೂಡಿಸುವುದು ಗುರಿ. ಮಹಾತ್ಮ ಗಾಂಧಿ ಕನಸಿನಂತೆ ಸ್ವಚ್ಛ ಭಾರತ ಉದ್ದೇಶದಿಂದ ಸರ್ಕಾರ ಸಮಾಜಮುಖಿ ಕಾರ್ಯ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಸ್ವಚ್ಛತೆ ಕಾಪಾಡಿದರೆ ಕರೊನಾ ತೊಲಗುತ್ತೆ:
ಸ್ವಚ್ಛ ಟ್ರಸ್ಟ್ ಕಾರ್ಯದರ್ಶಿ ಡಾ. ಗೀತಾ ವೆಂಕಟೇಶ್ ಮಾತನಾಡಿ, ಯಾವುದೆ ವರ್ಗದ ಕಾರ್ಮಿಕರಿಗೆ ಸೋಂಕು ಹರಡಿದರೆ ಕೆಲಸಗಾರರು ಸಿಗುವುದೇ ಕಷ್ಟವಾಗುತ್ತದೆ. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯಾಗದಂತೆ ಎಚ್ಚರಿಕೆ ವಹಿಸಿ ಸ್ವಚ್ಛತೆ ಕಾಪಾಡಿಕೊಂಡರೆ ಕರೊನಾ ತನ್ನಷ್ಟಕ್ಕೆ ತಾನೇ ತೊಲಗುತ್ತದೆ ಎಂದರು. ನಾಗರಿಕರು ಎಲ್ಲೆಂದರಲ್ಲಿ ಉಗುಳಬಾರದು. ಕೆಮ್ಮುವಾಗ, ಸೀನುವಾಗ ಕೈ ಅಥವಾ ಕರ್ಚೀಫ್ ಅನ್ನು ಅಡ್ಡ ಹಿಡಿಯಬೇಕು. ಪ್ರವಾಸದ ಸಂದರ್ಭ, ಸಭೆ ಸಮಾರಂಭಗಳಲ್ಲಿ ಊಟ, ಉಪಾಹಾರ ಸೇವಿಸಿದ ನಂತರ ಪೇಪರ್ ಪ್ಲೇಟ್‍ಗಳನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ಮಹಾತ್ಮ ಗಾಂಧಿ ಅವರ ಕನಸೇ ಸ್ವಚ್ಛ ಭಾರತ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಬೇಕು ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮ:
ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಅಮೃತ ಮಹೋತ್ಸವ ಅಂಗವಾಗಿ 2022ರ ಆಗಸ್ಟ್ವರೆಗೆ ನಗರಸಭೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಪೌರ ಕಾರ್ಮಿಕರಿಗೆ ಜರ್ಕಿನ್, ಕೈ ಗವಸು, ಹೆಲ್ಮೆಟ್, ವಿವಿಧ ಪರಿಕರಗಳನ್ನು ನೀಡಲಾಯಿತು. ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸ್ವಚ್ಛ ಟ್ರಸ್ಟ್ ಅಧ್ಯಕ್ಷೆ ಡಾ. ಶುಭಾ ವಿಜಯ್, ಕಾಫಿ ಲ್ಯಾಂಡ್ ಅಧ್ಯಕ್ಷ ಶ್ರೀನಿವಾಸ್, ಸಿಬ್ಬಂದಿ ಭಾಗವಹಿಸಿದ್ದರು.