

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಚೇರಿಯಲ್ಲಿ ಬರುವ ಜನರಿಗೆ ಸರಿಯಾದ ಸೇವೆ ನೀಡಲಾಗದೆ, ಹಳೇ ಕಟ್ಟಡದಲ್ಲಿ ಜೀವಭಯದಲ್ಲೇ ಸೇವೆ ನೀಡುವ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆ ಹೇಳತೀರದು.
ಹಲವು ಬೇಡಿಕೆ ಮುಂದಿಟ್ಟು ರಾಜ್ಯ ವ್ಯಾಪಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಮುಂದುವರಿದಿದ್ದು, ಇತ್ತ ಗ್ರಾಮಾಡಳಿತ ಅಧಿಕಾರಿಗಳ ಕಚೇರಿ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳಿದ್ದು, ಅದರಲ್ಲಿ 32 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮ ಸೇರಿದಂತೆ ಒಟ್ಟು 25 ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ಸಲ್ಲಿಸುತಿದ್ದಾರೆ. ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 16 ಕಂದಾಯ ಗ್ರಾಮಗಳಿದ್ದು, 9 ಗ್ರಾಮ ವೃತ್ತಗಳಿವೆ. ಅದರಲ್ಲಿ ತಾಲೂಕು ಕಚೇರಿ ಹಾಗೂ ಗ್ರಾಮ ಮಟ್ಟದಲ್ಲಿ ಒಟ್ಟು 7 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಬಹುತೇಕ ಕಡೆಗಳಲ್ಲಿ 70 ವರ್ಷದ ಹಳೇ ಕಟ್ಟಡಗಳಲ್ಲೇ ಇಂದಿಗೂ ಗ್ರಾಮ ಆಡಳಿತಾಧಿಕಾರಿಗಳು ಸೇವೆ ನೀಡುತ್ತ ಬರುತ್ತಿದ್ದಾರೆ. ಅದರಲ್ಲೂ ನಾಡ್ಪಾಲು ಗ್ರಾಮದ ಗ್ರಾಮಾಡಳಿತ ಕಚೇರಿಗೆ ಕೇವಲ ತಗಡು ಶೀಟ್ ಹೊಂದಿಸಿ ನಿಲ್ಲಿದ್ದು, ಗ್ರಾಮದ ದಾಖಲೆ ಇಡಲು ಸರಿಯಾದ ವ್ಯವಸ್ಥೆಗಳಿಲ್ಲ. ನಂದಳಿಕೆ ಗ್ರಾಮ ವ್ಯಾಪ್ತಿಯಲ್ಲೂ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷದಿಂದ ಸ್ಥಳೀಯ ಸರ್ಕಾರಿ ಶಾಲೆ ಕೋಣೆಯಲ್ಲೇ ಕಚೇರಿ ತೆರೆದು ಕಾರ್ಯಾಚರಿಸುತ್ತಿದೆ. ಹೆಬ್ರಿ ತಾಲೂಕಿನ ಎಳ್ಳಾರೆ ಕಚೇರಿ ಖಾಸಗಿ ಜಮೀನಿನಲ್ಲಿ ಕಾರ್ಯಾಚರಿಸುತ್ತಿದೆ. ಎಳ್ಳಾರೆ ಗ್ರಾಮಾಡಳಿತ ಕಚೇರಿಯಲ್ಲಿ 9 ದಿನಗಳ ಹಿಂದೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದ ಸಂದರ್ಭ ಪಕ್ಕಾಸು ತುಂಡಾಗಿ ಬಿದ್ದಿತ್ತು, ಆದರೆ ಗ್ರಾಮಾಡಳಿತ ಅಧಿಕಾರಿ ಸಮಯ ಪ್ರಜ್ಞೆಯಿಂದ ನಡೆಯಲಿದ್ದ ಭಾರಿ ದುರಂತ ತಪ್ಪಿ ಹೋಗಿತ್ತು. ಸುಮಾರು 70 ವರ್ಷಗಳ ಹಳೇ ಕಟ್ಟಡಗಳಾಗಿದ್ದ ಕಾರಣ ಮರದ ರೀಪು ತುಂಡಾಗಿ ಹೆಂಚು ನೇತಾಡುತ್ತಿವೆ. ಅಧಿಕಾರಿಗಳು ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸುವ ಸ್ಥಿತಿಯಿದೆ.
ಸರ್ಕಾರ ಸ್ವಚ್ಛತೆ ಕಾಪಾಡಬೇಕು ಸಾರ್ವಜನಿಕರಿಗೆ ಮಾಹಿತಿ ನೀಡುತ್ತದೆ. ಜಿಲ್ಲಾಡಳಿತ ಎಲ್ಲೆಡೆ ಶೌಚಗೃಹ ನಿರ್ಮಾಣಕ್ಕೆ ಪಣತೊಟ್ಟಿದ್ದರು. ಆದರೆ ಸರ್ಕಾರಿ ವ್ಯವಸ್ಥೆಯಲ್ಲೇ ಕರ್ತವ್ಯ ನಿರ್ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿಯಲ್ಲಿ ಶೌಚಗೃಹದ ವ್ಯವಸ್ಥೆಗಳಿಲ್ಲ. ಕಾರ್ಕಳ ತಾಲೂಕಿನ ಶೇ.60 ಗ್ರಾಮಾಡಳಿತ ಅಧಿಕಾರಿಗಳು ಮಹಿಳಾ ಸಿಬ್ಬಂದಿಯಾಗಿದ್ದು, ಹೆಬ್ರಿ ತಾಲೂಕಿನಲ್ಲಿ ಓರ್ವ ಗ್ರಾಮಾಡಳಿತ ಮಹಿಳಾ ಅಧಿಕಾರಿಯಿದ್ದು, ಶೌಚಗೃಹ ವ್ಯವಸ್ಥೆ ಇಲ್ಲದೆ ಸ್ಥಳೀಯ ಖಾಸಗಿ ಮನೆ ಶೌಚಗೃಹ ಆಶ್ರಯಿಸುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಬಹುತೇಕ ಗ್ರಾಮಾಡಳಿತ ಅಧಿಕಾರಿಗಳ ಕಚೇರಿ ನಿರ್ಮಾಣಕ್ಕಾಗಿ ವರ್ಷಗಳ ಹಿಂದೆ ಜಾಗ ಗುರುತಿಸಿದ್ದರೂ ಕಟ್ಟಡ ನಿರ್ಮಾಣಕ್ಕೆ ಸ್ವಂತ ಅನುದಾನವಿಲ್ಲ ಹೀಗಾಗಿ ಗುರುತಿಸಿದ ಜಮೀನು ಪಾಳು ಬಿದ್ದಿದೆ. ಇತ್ತೀಚೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕ ವಿ.ಸುನೀಲ್ ಕುಮಾರ್ ತಮ್ಮ ಶಾಸಕರ ನಿಧಿ ಹಾಗೂ ಗ್ರಾಪಂ ಸಹಕಾರದೊಂದಿಗೆ ಹಿರ್ಗಾನ 10 ಲಕ್ಷ ಹಾಗೂ ಕುಕ್ಕುಂದೂರು ಗ್ರಾಮದ ಗ್ರಾಮಾಧಿಕಾರಿ ಕಚೇರಿ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಸೂಡದ ಕಚೇರಿಯನ್ನು 5 ಲಕ್ಷ ರೂ. ಗಳ ಶಾಸಕರ ಅನುದಾನದಿಂದ ನವೀಕರಣ ಮಾಡಲಾಗಿದೆ. ಉಳಿದಂತೆ ಶಾಸಕರ ನಿಧಿಯಿಂದ ನೀರೆ, ಕೌಡೂರು, ನಂದಳಿಕೆ ಗ್ರಾಮ ಕಚೇರಿಗಳಿಗೆ ತಲಾ 5 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
ಗ್ರಾಮಾಡಳಿತ ಕಚೇರಿಗಳು ಸಾರ್ವಜನಿಕರಿಗೆ ಮನೆಕಟ್ಟಲು ಕಂದಾಯ ಭೂಮಿ ಗುರುತಿಸಿ ಸರ್ಕಾರಕ್ಕೆ ವರದಿ ನೀಡುತ್ತವೆ. ಆದರೆ ಅದರಲ್ಲೂ ತಮ್ಮ ಸ್ವಂತ ಕಟ್ಟಡ ನಿರ್ಮಾಣ ಮಾಡುವಲ್ಲಿ ಸ್ಥಳ ನಿಗದಿ ಮಾಡುವಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ತಾಲೂಕಿನ ಮಾಳ ಕೆರ್ವಾಶೆ, ಎರಲಪಾಡಿ, ನೀರೆ ಬೈಲೂರು, ಹೆರ್ಮುಂಡೆ, ಮರ್ಣೆ, ಅಂಡಾರು, ಇರ್ವತ್ತೂರು, ಪಳ್ಳಿ, ನಲ್ಲೂರು, ರೆಂಜಾಳ, ಮುಡಾರು, ಈದು, ಮಿಯ್ಯರು, ಸಾಣೂರು, ಬೋಳ, ಕಾಂತಾವರ, ಮುಂಡ್ಕೂರು, ಇನ್ನಾ, ಕಲ್ಯಾ, ನಿಟ್ಟೆ ಹೆಬ್ರಿ ತಾಲೂಕಿನ ಶಿವಪುರ, ವರಂಗ, ಮುದ್ರಾಡಿ, ಮಡಮಕ್ಕಿ, ಬೆಳ್ವೆ, ಕುಚ್ಚೂರು ಎಲ್ಲ ಕಚೇರಿಗಳು ಗ್ರಾಪಂ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯತೆಯಿದೆ. ಜಾಗವಿದ್ದರೂ ಸ್ವಂತ ಕಟ್ಟಡವಿಲ್ಲ, ಮೂಲಸೌಕರ್ಯಗಳಿಲ್ಲ ಇವೆಲ್ಲದರ ನಡುವೆ ಎರಡು ಮೂರು ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ್ಯ ಸ್ಥಿತಿಯಿದೆ. ಕನಿಷ್ಠ ನಮ್ಮ ಬೇಡಿಕೆಗಳಿಗಾದರೂ ಸರ್ಕಾರ ಸ್ಪಂದಿಸುವ ಅನಿವಾರ್ಯವಿದೆ. ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಗ್ರಾಮ ಆಡಳಿತಾಧಿಕಾರಿ ಕಚೇರಿ ಹಾಗೂ ಅದಕ್ಕೆ ಬೇಕಾಗಿರುವ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ಮನಸ್ಸು ಮಾಡಬೇಕಾಗಿದೆ. ವಿ.ಸುನೀಲ್ ಕುಮಾರ್ ಶಾಸಕ