

ಕಿಕ್ಕೇರಿ: ನಂಬಿದವರ ತಲೆ ಕಾಯುವುದರೊಂದಿಗೆ ದುಷ್ಟಶಕ್ತಿಗಳಿಗೆ ದುಸ್ವಪ್ನವಾಗಿ ಗ್ರಾಮದಲ್ಲಿ ನೆಲೆಸಿರುವ ದೇವಿ ಕೋಡಿ ಮಾರಮ್ಮ ಗ್ರಾಮ ರಕ್ಷಕಿಯಾಗಿದ್ದಾಳೆ.
ಹೋಬಳಿಯ ಚಿಕ್ಕತರಹಳ್ಳಿಯಲ್ಲಿ ನೆಲೆಸಿರುವ ದೇವಿಗೆ ಮಾರಿಕಾಂಬ, ಮಾರಮ್ಮ, ಕೋಡಿ ಮಾರಮ್ಮ, ಕೆರೆ ಕೋಡಿ ಮಾರಮ್ಮ ಎಂದು ಕರೆಯಲ್ಪಡುತ್ತದೆ. ಪ್ರಕೃತಿಯ ಸುಂದರ ತಾಣದಲ್ಲಿ ವಿರಾಜಮಾನಳಾಗಿ ನೆಲೆಸಿರುವ ದೇವಿಗೆ ವರ್ಷಪೂರ್ತಿ ಪೂಜೆ ನೆರವೇರುತ್ತದೆ. ಗ್ರಾಮದ ಮಧ್ಯಭಾಗದಲ್ಲಿ (ಹಿಂದೆ ಗ್ರಾಮದ ಕೆರೆ ತಪ್ಪಲಿನಲ್ಲಿ ಹೊರಗಿನಂಚಿನಲ್ಲಿತ್ತು) ಪೂರ್ವಾಭಿಮುಖವಾಗಿ ನೆಲೆಸಿದ್ದು, ಎಲ್ಲರ ತಲೆ ಕಾಯುತ್ತಿದ್ದಾಳೆ.
ಗ್ರಾಮದ ಹಿರಿಯ ಮುಖಂಡರೊಬ್ಬರಿಗೆ ಸ್ವಪ್ನದಲ್ಲಿ ಮಾರಮ್ಮ ದೇವಿ ಕಾಣಿಸಿಕೊಂಡು ಗ್ರಾಮದ ರಕ್ಷಕಿಯಾಗಿ ನೆಲೆಸುವುದಾಗಿ ನುಡಿಯುತ್ತಾಳೆ. ನಂತರ ಗ್ರಾಮಸ್ಥರು ಗ್ರಾಮದಲ್ಲಿ ದೇವಿ ಉದ್ಭವಿಸಿರುವುದನ್ನು ಹುಡುಕಾಡಿ ಅಂತಿಮವಾಗಿ ಕೆರೆ ಕೋಡಿ ಬಳಿ ಕೋಡುಗಲ್ಲಿನಂತೆ ಇರುವುದು ಕಾಣ ಸಿಗುತ್ತದೆ. ಬಳಿಕ ಶ್ರದ್ಧಾಭಕ್ತಿಯಿಂದ ಸ್ಥಳವನ್ನು ಶುಚಿಗೊಳಿಸಿ ಪುಟ್ಟದಾದ ಗುಡಿ ನಿರ್ಮಿಸುತ್ತಾರೆ.
ಈ ನಡುವೆ ಓಡಿಗೆಯಿಂದಾಗಿ (ಪ್ಲೇಗ್‌ನಂತಹ ರೋಗ) ಗ್ರಾಮಸ್ಥರು ಚಿಂತೆಗೆ ಒಳಗಾದಾಗ ಒಗ್ಗಟ್ಟಿನಿಂದ ಮಾರಮ್ಮನನ್ನು ಪೂಜಿಸಿ ದೇವಿಗೆ ಎಣ್ಣೆ, ಬೇವಿನಸೊಪ್ಪು, ಅರಿಶಿಣ, ಮೊಸರನ್ನದಿಂದ ನೈವೇದ್ಯ ಮಾಡಿ ತಂಪೆರೆಯುತ್ತಾರೆ. ಇದರಿಂದ ದೇವಿ ಪ್ರಸನ್ನಳಾಗಿ ಗ್ರಾಮಕ್ಕೆ ಕಾಲಿಟ್ಟಿದ್ದ ಪ್ಲೇಗು, ಸಿಡಿಬಿನಂತಹ ಮಹಾಮಾರಿ ಕಾಯಿಲೆ ದೂರವಾಯಿತು ಎನ್ನುವ ಐತಿಹ್ಯವಿದೆ. ಗ್ರಾಮವನ್ನು ಹಲವು ಸಾಮಂತ ದೊರೆಗಳು ಪ್ರಬುದ್ಧಮಾನವಾಗಿ ಆಳ್ವಿಕೆ ಮಾಡಿದ ಕುರುಹುಗಳಿವೆ.
ಬಲು ಹಿಂದೆ ಗ್ರಾಮಸ್ಥರು ತಮ್ಮ ದೈನಂದಿನ ಕೆಲಸಕಾರ್ಯ ಮುಗಿಸಿಕೊಂಡು ಮಾರಮ್ಮ ದೇವಿಗೆ ಗಂಗೆಯ ಅಭಿಷೇಕ ಮಾಡಿ ಮನೆ ತಲುಪುತ್ತಿದ್ದರು. ರೈತರು ಕೃಷಿ ಚಟುವಟಿಕೆಗೂ ಮುನ್ನ ದೇವಿ ಗುಡಿಗೆ ತೆರಳಿ ಗಂಗಾಭಿಷೇಕ ಮಾಡುತ್ತಿದ್ದರು ಎನ್ನಲಾಗಿದೆ. ಎಮ್ಮೆ, ಹಸು ಕರು ಹಾಕಿದಾಗ ಮೊದಲು ಮಾರಮ್ಮ ದೇವಿಗೆ ಮೊಸರನ್ನ ತಳಿಗೆ ಒಪ್ಪಿಸುತ್ತಿದ್ದರು. ಇದರಿಂದಾಗಿ ದೇವಿ ಸದಾ ತಂಪಾಗಿ ಇಡೀ ಗ್ರಾಮ ಕಾಯುತ್ತಿದ್ದಳು. ಸಣ್ಣ ರೋಗ, ದುಷ್ಟಶಕ್ತಿ ಗ್ರಾಮಕ್ಕೆ ನುಸುಳದಂತೆ ರಕ್ಷಾ ಕವಚವಾಗಿದ್ದಳು. ಗಂಧದಕಡ್ಡಿ, ಹೂವು, ಹಳೆಯ ಅಂಚಿನ ಕಡ್ಡಿ ಹಿಡಿದು ಗ್ರಾಮಸ್ಥರು ಪ್ರದಕ್ಷಿಣೆ ಹಾಕಿದ ಬಳಿಕ ಹೊರವಲಯದಲ್ಲಿ ಅಗ್ನಿಸ್ಪರ್ಶ ಮಾಡಿ ಹಳೆಯ ಪೊರಕೆ, ಕಡ್ಡಿಗಳನ್ನು ಸುಟ್ಟು ಹಾಕುತ್ತಿದ್ದರು. ಇದರಿಂದ ಸೋಂಕು ಮಾಯವಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಹಿರಿಯ ಜೀವಗಳು.
ಸಿಡುಬು, ದಡಾರ, ಹುಣ್ಣುನಂತಹ ಚರ್ಮವ್ಯಾಧಿ ಸಮಸ್ಯೆಗಳು ಕಾಡಿದರೆ ವೈದ್ಯಕೀಯ ಚಿಕಿತ್ಸೆಗೂ ಮುನ್ನ ಅಮ್ಮನ ಗುಡಿಗೆ ಬಂದು ಶ್ರದ್ಧೆಯಿಂದ ಮಾರಮ್ಮನಿಗೆ ಗಂಗಾಭಿಷೇಕ ನೆರವೇರಿಸಲಾಗುತ್ತದೆ. ಬಳಿಕ ಎಳನೀರು, ಬೇವಿನಸೊಪ್ಪು, ಎಣ್ಣೆ, ಅರಿಶಿಣದಿಂದ ತಂಪು ಮಾಡಿ ಬೆಲದನ್ನ, ಮೊಸರನ್ನ ತಳಿಗೆ ಇಡುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ರೋಗ ಗುಣಮುಖವಾಗಲಿದೆ. ಇದಲ್ಲದೆ ಹಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥಿಸಿ ಕೋಳಿ, ಕುರಿ, ಮೇಕೆ ಬಲಿ ನೀಡುವುದೂ ಉಂಟು.
ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, ಶಿಥಿಲವಾಗಿದ್ದ ದೇಗುಲವನ್ನು ನಾಲ್ಕೈದು ವರ್ಷಗಳ ಹಿಂದೆ ಗ್ರಾಮಸ್ಥರು ದಾನಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿದ್ದಾರೆ. ಉದ್ಭವ ಮೂರ್ತಿಯೊಂದಿಗೆ ಕೋಣನ ವಾಹನದ ಮೇಲೆ ಆಸನರೂಢರಾಗಿರುವಂತೆ ಅಮ್ಮನ ಮೂರ್ತಿ ನಿರ್ಮಿಸಲಾಗಿದೆ. ಗ್ರಾಮದಲ್ಲಿರುವ ವೀರಭದ್ರಸ್ವಾಮಿ, ಚೌಡಮ್ಮ, ಸತ್ಯಮ್ಮ, ಮೈಲಾರಲಿಂಗೇಶ್ವರ ದೇವಿಗೆ ಪೂಜೆ ಸಲ್ಲಿಸುವ ವೇಳೆ ದೇವಿಗೂ ಅಗ್ರಪೂಜೆ ಸಲ್ಲಿಸುವುದು ವಾಡಿಕೆ.
ವಿಶೇಷ ಪೂಜೆ: ದೇವಿಗೆ ನಿತ್ಯಪೂಜೆಯೊಂದಿಗೆ ಮಂಗಳವಾರ, ಶುಕ್ರವಾರದಲ್ಲಿ ವಿಶೇಷ ಪೂಜೆ ನೆರವೇರಲಿದೆ. ದೀಪಾವಳಿ, ಯುಗಾದಿ ತರುವಾಯ ನಡೆಯುವ ದೊಡ್ಡ ಮಾರಮ್ಮನ ಹಬ್ಬ ಗ್ರಾಮದೇವತೆ ಹಬ್ಬವಾಗಿದೆ. ಇಡೀ ಊರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಗ್ರಾಮದ ಮಹಿಳೆಯರು ತಂಬಿಟ್ಟು, ಹೂವಿನ ರಾಗಿದೀವಿಗೆ ನಿರ್ಮಿಸಿಕೊಂಡು ತಮಟೆ ಮದ್ದಳೆ ನಾದದೊಂದಿಗೆ ಗ್ರಾಮ ಪ್ರದಕ್ಷಿಣೆ ಮೆರವಣಿಗೆ ನಡೆಸುತ್ತಾರೆ.ಉತ್ಸವ ಮೂರ್ತಿ ಮೆರವಣಿಗೆ ನಡೆದ ತರುವಾಯ ದೇವಿಯ ಗುಡಿಗೆ ಸಾಗಿ ಹೂವಿನ ಮಡೆ ಆರತಿ ಬೆಳಗಿ ಚಿಗಣಿ, ತಂಬಿಟ್ಟಿನ ಪ್ರಸಾದ ನೀಡುತ್ತಾರೆ. ಮರಿಯಪ್ಪನ ಚಿಕ್ಕೇಗೌಡರ ವಂಶಸ್ಥರು ದೇವಿಯ ಪಾರಂಪರ್ಯ ಅರ್ಚಕರಾಗಿದ್ದಾರೆ. ಮೇ 9 ಹಾಗೂ 10ರಂದು ದೇವಿಗೆ ವಿಶೇಷ ವಾರ್ಷಿಕ ಪೂಜೆ, ಗರುಡಗಂಬ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ತಲುಪುವ ಮಾರ್ಗ: ಗ್ರಾಮಕ್ಕೆ ಸಾರಿಗೆ ವಾಹನ ಸೌಲಭ್ಯವಿಲ್ಲ. ಚನ್ನರಾಯಪಟ್ಟಣ-ಕಿಕ್ಕೇರಿ ಮಾರ್ಗವಾಗಿ ಬಂದರೆ ಮಧ್ಯದ ಆನೆಗೊಳ ಗ್ರಾಮದಲ್ಲಿ ಇಳಿದು, ಅಲ್ಲಿಂದ 2 ಕಿ.ಮೀ. ಸಾಗಿದರೆ ದೇಗುಲವಿದೆ. ಇಲ್ಲಿಗೆ ಖಾಸಗಿ ವಾಹನ ಸೌಲಭ್ಯವಿದೆ.
ದೇವಿ ಕೆರೆ ಕೋಡಿ ಮಾರಮ್ಮ ಗ್ರಾಮವನ್ನು ಕಾಯುವ ದೇವತೆ. ನಂಬಿ ಪೂಜಿಸಿದರೆ ಅಭಯ ನೀಡುವ ದೇವಿ. ಈ ದೇಗುಲಕ್ಕೆ ತನ್ನದೇ ಆದ ವಿಶೇಷತೆ ಇದೆ.
> ನಂಜುಂಡೇಗೌಡ ರೈತ
ದೇವಿಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದೇವೆ. ವಂಶಪಾರಂಪರ್ಯ ಪೂಜಾರಿಕೆ ನಮ್ಮದಾಗಿದೆ. ನಾಲ್ಕು ಕುಟುಂಬ ಸರತಿಯಲ್ಲಿ ಪೂಜೆ ಮಾಡಲಿದ್ದು, ದೇಗುಲದ ಅಭಿವೃದ್ಧಿಗೆ ದಾನಿಗಳ ಸಹಕಾರ ಬೇಕಿದೆ.
>ನಂಜುಂಡೇಗೌಡ ಅರ್ಚಕ
ಭಕ್ತಿಯಿಂದ ಪೂಜಿಸಿದರೆ ಅನಾಥರಕ್ಷಕಿಯಾಗಿ ತಲೆಕಾಯುವವಳು ಮಾರಮ್ಮ. ಎಂತಹ ಸಂಕಷ್ಟವಿದ್ದರೂ ವರ್ಷಕ್ಕೊಮ್ಮೆ ತಪ್ಪದೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇಲ್ಲಿ ಮೌಢ್ಯವಿಲ್ಲ. ಭಕ್ತಿಯ ಪೂಜೆಗೆ ದೇವಿ ಖಂಡಿತ ಒಲಿಯುತ್ತಾಳೆ.
>ಡಾ.ಅನುಸೂಯಾ ಮಂಜುನಾಥ್ ಭಕ್ತೆ