

ಹರೀಶ್ ಮೋಟುಕಾನ ಮಂಗಳೂರು
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಮ್ಮ ಮನೆಯ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗದಿದ್ದರೆ ದೂರು ಹಿಡಿದುಕೊಂಡು ಪಾಲಿಕೆಗೆ ಬರಬೇಕಾಗಿಲ್ಲ. ಪಾಲಿಕೆ ಸದಸ್ಯರಿಗೆ, ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುವ ಅಗತ್ಯವಿಲ್ಲ. ಇದಕ್ಕಾಗಿ ಸ್ಮಾರ್ಟ್‌ಸಿಟಿಯಿಂದ ಶೀಘ್ರದಲ್ಲೇ ಮಂಗಳೂರು ವನ್ ಆ್ಯಪ್ ಬಿಡುಗಡೆಯಾಗಲಿದೆ. ಮನೆಯಿಂದಲೇ ದೂರು ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿರುವ ಆಯ್ಕೆಯ ಮೂಲಕ ದೂರು ಸಲ್ಲಿಸಬಹುದು. ಅದನ್ನು ಪಾಲಿಕೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಆರೋಗ್ಯ ಇಲಾಖಾಧಿಕಾರಿಗಳಿಗೂ ಸಂದೇಶ ಹೋಗುತ್ತದೆ. ತ್ಯಾಜ್ಯ ವಿಲೇವಾರಿ ಮಾಡದವರ ಮೇಲೆ ಕೈಗೊಂಡ ಕ್ರಮದ ಬಗ್ಗೆಯೂ ದೂರುದಾರರಿಗೆ ಮಾಹಿತಿ ಲಭ್ಯವಾಗುತ್ತದೆ. ಆ್ಯಪ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರ ಅನುಷ್ಠಾನವಾಗಲಿದೆ ಎಂದು ಎಂದು ಸ್ಮಾರ್ಟ್‌ಸಿಟಿ ಐಟಿ ವಿಭಾಗದ ಡಿಜಿಎಂ ಮನೋರಂಜನ್ ರಾವ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕ್ಯೂಆರ್ ಕೋಡ್: ಪಾಲಿಕೆ ಮತ್ತು ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸುವ ಉದ್ದೇಶದಿಂದ ಎಲ್ಲ ವಾರ್ಡ್‌ಗಳಲ್ಲಿ ಮನೆ, ಅಂಗಡಿಗಳಿಗೆ ಕ್ಯೂಆರ್ ಕೋಡ್ ಅಳವಡಿಸುವ ಪ್ರಕ್ರಿಯೆ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿದೆ. ಈಗಾಗಲೇ 20 ಸಾವಿರ ಕ್ಯೂಆರ್ ಕೋಡ್ ಅಳವಡಿಸಿದ್ದು, 80 ಸಾವಿರ ಅಳವಡಿಕೆಗೆ ಬಾಕಿ ಇದೆ. ಈ ಮೂಲಕ ತ್ಯಾಜ್ಯ ಸಂಗ್ರಹದ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ.
ನಗರದಲ್ಲಿ ಕೆಲವು ವಾರ್ಡ್‌ಗಳಲ್ಲಿ ಪ್ರತಿ ದಿನ ತ್ಯಾಜ್ಯ ಸಂಗ್ರಹಣಾ ವಾಹನಗಳು ಬರುವುದಿಲ್ಲ ಎಂದು ಸಾರ್ವಜನಿಕರು ಪಾಲಿಕೆಗೆ ದೂರು ನೀಡುತ್ತಿದ್ದರು. ಈ ಕುರಿತು ಪರಿಶೀಲನೆ ನಡೆಸಲು ಮತ್ತು ದೂರುಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಈ ನೂತನ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ಕೆಲವು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅಳವಡಿಸಿದ್ದು, ಯಶಸ್ವಿಯಾದ ಕಾರಣ ಎಲ್ಲ ವಾರ್ಡ್‌ಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ
ಕಾರ್ಯನಿರ್ವಹಣೆ ಹೇಗೆ?: ಹಣಕಾಸು ವ್ಯವಹಾರಗಳಿಗೆ ಆನ್‌ಲೈನ್ ಪೇಮೆಂಟ್‌ಗೆ ಬಳಸುವ ಕ್ಯೂಆರ್ ಕೋಡ್ ಮಾದರಿಯಲ್ಲಿ ಇದನ್ನು ಸಿದ್ದಪಡಿಸಲಾಗಿದೆ. ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೋಟೆಲ್, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್, ಮಳಿಗೆಗಳು, ವಿವಿಧ ಉದ್ಯಮಗಳ ಆವರಣ ಗೋಡೆಗಳಿಗೆ ಕ್ಯೂಆರ್ ಕೋಡ್ ಅಂಟಿಸಲಾಗುತ್ತದೆ. ಕಸ ಸಂಗ್ರಹಿಸುವ ಕಾರ್ಮಿಕರಿಗೆ ಕ್ಯೂಆರ್ ಕೋಡ್ ಸ್ಕಾೃನ್ ಮಾಡಲು ಪ್ರತ್ಯೇಕ ಸ್ಕಾೃನರ್ ನೀಡಲಾಗುತ್ತದೆ. ಅವರು ಸ್ಕಾೃನ್ ಮಾಡಿ ಆ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಸಂದೇಶ ರವಾನೆಯಾಗುತ್ತದೆ. ಸೆಂಟರ್‌ನಲ್ಲಿರುವ ಸಿಬ್ಬಂದಿ ಅದನ್ನು ಗಮನಿಸುತ್ತಾರೆ. ಒಂದು ವೇಳೆ ಕ್ಯೂಆರ್ ಕೋಡ್ ಸ್ಕಾೃನ್ ಮಾಡದೆ ಇದ್ದರೆ ಆ ಮನೆಯಿಂದ ತ್ಯಾಜ್ಯ ಸಂಗ್ರಹ ಮಾಡಿಲ್ಲ ಎಂದು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಮನೋರಂಜನ್ ರಾವ್ ಮಾಹಿತಿ ನೀಡಿದ್ದಾರೆ.
ತ್ಯಾಜ್ಯ ಸಂಗ್ರಹದ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಯೋಗಿಕವಾಗಿ ಯಶಸ್ಸು ಗಳಿಸಿರುವುದರಿಂದ ಇನ್ನು ಮುಂದೆ ಎಲ್ಲ ವಾರ್ಡ್‌ಗಳಲ್ಲೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಇದರ ಅಳವಡಿಕೆಯಾಗಲಿದೆ.
ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ