ಪೀಣ್ಯ ರಸ್ತೆಯಲ್ಲಿ ಧೂಳ್‌ ಮಗಾ ಧೂಳ್; ರಸ್ತೆಬದಿ ವ್ಯಾಪಾರಿಗಳಿಗೆ ಅನಾರೋಗ್ಯ

peenya
Published on

ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು : ಒಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 8 ವಿಭಾಗಗಳಾಗಿ ಗ್ರೇಟರ್ ಬೆಂಗಳೂರು ಯೋಜನೆಯ ಅನುಷ್ಠಾನದ ಧಾವಂತದಲ್ಲಿ ಸರ್ಕಾರ ಇದೆ. ಇನ್ನೊಂದೆಡೆ ನಗರದ ಗುಂಡಿಬಿದ್ದ ರೆಸ್ತೆಗಳು, ಬೆಸ್ಕಾಂ ಕೇಬಲ್ ಅಳವಡಿಕೆ ಕಾಮಗಾರಿಯಿಂದ ಉಂಟಾಗಿರುವ ಅಡಚಣೆಗಳು ಪ್ರಯಾಣಿಕರನ್ನು, ರಸ್ತೆ ಬದಿಯ ವ್ಯಾಪಾರಿಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಪೀಣ್ಯಕ್ಕೆ ಹೋಗುವ ಕಂಠೀರವ ಸ್ಟುಡಿಯೋ ಮುಖ್ಯರಸ್ತೆಯಲ್ಲಿ ಕಳೆದ 6 ತಿಂಗಳಿಂದ ಎಲ್ಲಿ ನೋಡಿದರೂ, ಧೂಳು, ಧೂಳು, ಧೂಳು. ಡಾ.ರಾಜಕುಮಾರ್ ಸಮಾದಿ ಬಳಿ ಇರುವ ಕಂಠೀರವ ಸ್ಟುಡಿಯೋ ರಸ್ತೆಯ ಮೂಲಕ ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಗೆ ಹೋಗುವ ರಸ್ತೆಯಲ್ಲಿ ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ರಸ್ತೆಯಲ್ಲಿ ಬಿದ್ದಿರು ಗುಂಡಿಗಳಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ವಾಹನ ಸಂಚಾರ, ಪಾದಚಾರಿಗಳು, ರಸ್ತೆಬದಿ ಇರುವ ಅಂಗಡಿ, ಬೇಕರಿ ಮತ್ತಿತರ ವ್ಯಾಪಾರಿಗಳು ಮಿತಿಮೀರಿದ ಧೂಳಿನಿಂದಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಸ್ಕಾಂನವರು ಎಲೆಕ್ಟ್ರಿಕ್ ಕೇಬಲ್ ಅಳವಡಿಸುವುದಕ್ಕಾಗಿ ತೆಗೆದ ಟ್ರೆಂಚ್ ತಿಂಗಳುಗಟ್ಟಲೆ ಮುಚ್ಚದೆ ಹಾಗೇ ಬಿಟ್ಟಿದ್ದರು. ಇತ್ತೀಚೆಗೆ ಟ್ರೆಂಚ್ ಮುಚ್ಚಿದಾರಾದರೂ ರಸ್ತೆಯಲ್ಲಿದ್ದ ಟಾರ್ ಸಂಪೂರ್ಣವಾಗಿ ಕಿತ್ತು ಹೋಗಿರುವುದರಿಂದ ವಾಹನಗಳು ಸಂಚರಿಸುವಾಗ ಇಡೀ ಪ್ರದೇಶ ಧೂಳಿನಿಂದ ಮುಚ್ಚಿಹೋಗುತ್ತಿದೆ. ಈ ಬಗ್ಗೆ ಸ್ಥಳೀಯರು ಎಷ್ಟೇ ಬಾರಿ ಬಿಬಿಎಂಪಿ, ಬೆಸ್ಕಾಂ ಇತರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಹೀಗೆಯೇ ಮುಂದುವರೆದರೆ ಇಲ್ಲಿ ಜೀವನ ಮಾಡುವುದು ಬಹಳ ಕಷ್ಟವಾಗುತ್ತದೆ ಎಂಬುದು ಸ್ಥಳೀಯರ ಅಳಲು. ಅನಿವಾರ್ಯವಾಗಿ ಜೀವನೋಪಾಯಕ್ಕಾಗಿ ದಿನಪೂರ್ತಿ ಧೂಳಿನಲ್ಲಿ ಕೆಲಸ ಮಾಡುವ ಸಣ್ಣಪುಟ್ಟ ಅಂಗಡಿ, ಚರ್ಮ ಕುಟೀರದ ಕಾರ್ಮಿಕರು, ಸದಾ ಕೆಮ್ಮು, ಗಂಟಲು ನೋವು, ಕಣ್ಣು ನೋವು ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಪ್ರಾಣಹಾನಿಯೂ ಸಂಭವಿಸಬಹುದು ಎಂಬುದು ಸ್ಥಳೀಯರ ಆತಂಕ.

ಕೈಚೆಲ್ಲಿದ ಸಂಚಾರ ಪೊಲೀಸರು

ರಸ್ತೆಯಲ್ಲಿ ಮಿತಿಮೀರಿದ ಧೂಳನ್ನು ನಿಯಂತ್ರಿಸಲು ಸ್ವತಃ ಸಂಚಾರ ಪೊಲೀಸರು ಪ್ರತಿನಿತ್ಯ ಟ್ಯಾಂಕರ್ ಮೂಲಕ ರಸ್ತೆಗೆ ನೀರು ಸಿಂಪಡಿಸುತ್ತಿದ್ದರಂತೆ. ಆದರೆ ಬಿಸಿಲಿನ ಝಳ ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಲ್ಪೇ ಹೊತ್ತಿನಲ್ಲಿ ನೀರು ಆರಿಹೋಗಿ ಧೂಳು ಹಾರುತ್ತಿದೆ. ಇದರಿಂದ ಬೇಸೆತ್ತು ಧೂಳಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಇಎಸ್‌ಐ ಆಸ್ಪತ್ರೆ ಕಡೆ ತಿರುಗುವ ಜಂಕ್ಷನ್‌ನಲ್ಲಿ ಇರುವ ಪೊಲೀಸ್ ಚೌಕಿ ಅನಾಥವಾಗಿದೆ. ಇದರಿಂದಾಗಿ ಸಿಗ್ನಲ್ ರಹಿತ ಸರ್ಕಲ್‌ನಲ್ಲಿ ಸಂಚಾರ ಸಿಕ್ಕು ಹೆಚ್ಚಾಗಿದೆ. ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಕಾಲೇಜು, ಹಲವು ಗಾರ್ಮೆಂಟ್ಸ್ ಕಂಪನಿಗಳು, ವಿವಿಧ ಕೈಗಾರಿಕೆಗಳು ಇರುವುದರಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಜನಸಂಚಾರ ಹೆಚ್ಚಾಗಿರುತ್ತದೆ. ಸಹಜವಾಗಿ ಅದರಿಂದ ಸಂಚಾರಸಿಕ್ಕು ಉಂಟಾಗುತ್ತದೆ.

ವಿಫಲ ಅಂಡರ್‌ಪಾಸ್ ಕಾಮಗಾರಿ

ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಯಿಂದ ಸಿಟಿ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸುಗಮ ಸಂಚಾರಕ್ಕಾಗಿ ಕಳೆದ ಕೆಲ ವರ್ಷಗಳ ಹಿಂದೆ ಕೈಗೆತ್ತಿಕೊಂಡಿದ್ದ ಅಂಡರ್ ಪಾಸ್ ಕಾಮಗಾರಿ ಸಂಪೂರ್ಣ ವಿಲಗೊಂಡಿದೆ. ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳೇ ಕಳೆದು ಹೋಗಿದೆ. ತುಮಕೂರು ರಸ್ತೆಗೆ ಸಂಪರ್ಕ ಕಲ್ಪಸುವ ರಿಂಗ್ ರಸ್ತೆಯ ಫ್ಲೈಓವರ್ ಇಲ್ಲಿ ಹಾದು ಹೋಗಿರುವುದರಿಂದ ಒಂದು ವೇಳೆ ಅಂಡರ್ ಪಾಸ್ ಕಾಮಗಾರಿ ಮಾಡಿದರೂ ನಿರರ್ಥಕವಾಗುತ್ತದೆ. ಒಟ್ಟಾರೆ ಅಂಡರ್‌ಪಾಸ್ ಸದ್ಯ ಕಸದ ತೊಟ್ಟಿಯಂತಾಗಿದ್ದು, ಗಬ್ಬು ವಾಸನೆಗೆ ಕಾರಣವಾಗಿದೆ. ಅಂಡರ್ ಪಾಸ್ ಕಾಮಗಾರಿಯ ಜಾಗ ವ್ಯರ್ಥವಾಗಿದ್ದು, ಅಕ್ಕಪಕ್ಕದ ರಸ್ತೆ ಕಿರಿದಾಗಿದೆ. ಈ ನಡುವೆ ರಸ್ತೆಯ ಟಾರ್ ಕಿತ್ತು ಫುಟ್​ಪಾತ್ ಮೇಲೆ ಸುರಿದಿರುವುದರಿಂದ ಪಾದಾಚಾರಿಗಳು ಪ್ರಾಣಭಯದಲ್ಲಿ ರಸ್ತೆಯ ಮೇಲೆ ನಡೆಯಬೇಕಾಗಿದೆ.

6 ತಿಂಗಳಿಂದ ಬಹಳ ಕಷ್ಟ ಆಗಿದೆ. ಧೂಳಿನ ಸಮಸ್ಯೆಯಿಂದ ಆರೋಗ್ಯ ಹದಗೆಟ್ಟಿದೆ.ಬೇಕರಿನಲ್ಲಿ ವ್ಯಾಪಾರನೂ ಕಡಿಮೆ ಆಗಿದೆ. ಹುಡುಗರು ಕೆಲಸ ಬಿಟ್ಟು ಹೋಗ್ತಿದಾರೆ. ಯಾರು ಬಂದರೂ ಇರೋದಿಲ್ಲ. ಗಂಟಲು ನೋವು, ಕೆಮ್ಮು ಕಡಿಮೆನೇ ಆಗ್ತಿಲ್ಲ. ಬೆಳಗ್ಗೆ, ಸಂಜೆ ಹೊತ್ತು ಇರೋದೇ ಕಷ್ಟ ಆಗ್ತಿದೆ. -ರಾಜೀವ್, ಬೇಕರಿ ವ್ಯಾಪರಿ
ರಸ್ತೆ ಅಕ್ಕಪಕ್ಕ ಹೋಗೋದು ಕಷ್ಟ. ರಸ್ತೆ ದಾಟೋಕೂ ಆಗ್ತಿಲ್ಲ. ಅಧಿಕಾರಿಗಳಿಗೆ ಎಷ್ಟು ಹೇಳಿದರೂ ಸಮಸ್ಯೆ ಬಗೆಹರೀತಿಲ್ಲ. ಪೊಲೀಸರು ಏನು ಮಾಡೋಕಾಗದೆ ಇಲ್ಲಿ ಬರೋದೆ ಬಿಟ್ಟಿದಾರೆ. ಮಳೆ ಬಂದಾಗಂತೂ ಪರಿಸ್ಥಿತಿ ತೀರಾ ಹದಗೆಡುತ್ತೆ. ಪದೇ ಪದೇ ಹುಷಾರ್ ತಪ್ಪುತ್ತೆ. -ಪರಮೇಶ್, ವಾಹನ ಚಾಲಕ
ಈ ರಸ್ತೆ ಪ್ರಾಬ್ಲಂನಿಂದ ತಿಂಗಳುಗಳಿಂದ ಆರೋಗ್ಯ ಸರಿ ಹೋಗ್ತಿಲ್ಲ. ಗಂಟಲು ನೋವು, ಜ್ವರ ಕಡಿಮೆನೇ ಆಗ್ತಿಲ್ಲ. ಡಾಕ್ಟರ್ ಕೇಳಿದ್ರೆ ಡಸ್ಟ್ ಅಲರ್ಜಿ ಅಂತಾರೆ. ನಮಗೆ ಇದನ್ನ ಬಿಟ್ಟರೆ ಜೀವನಕ್ಕೆ ಬೇರೆ ದಾರಿ ಇಲ್ಲ. ಕಾಮಗಾರಿ ವಿಳಂಭಕ್ಕೆ ಕಾರಣ ಏನು ಅಂತ ಗೊತ್ತಾಗ್ತಿಲ್ಲ. -ದಿನೇಶ್, ಅಂಗಡಿ ವ್ಯಾಪಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net