

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮ್ನಿ ಅಸೋಸಿಯೇಷನ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಯೋಗ ದಸರಾ, ಯೋಗ ನೃತ್ಯರೂಪಕ ಕಾರ್ಯಕ್ರಮದಲ್ಲಿ ಯೋಗ ಸಾಧಕರಿಗೆ ದಸರಾ ಯೋಗ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯೋಗದಲ್ಲಿ ಸಾಧಕರಾದ ದೇವರಾಜು, ಯೋಗಕುಮಾರ್, ಸತ್ಯವತಿ, ಚಂದ್ರು, ಬಾಪು ಆರ್.ನಚೀಕೇತ ಹಾಗೂ ಆರ್.ರಮಾ ಅವರಿಗೆ ಯೋಗ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಭೂಮಿ ಮೇಲಿನ ನಕ್ಷತ್ರವೆನ್ನುವ ವಿಶೇಷ ಚೇತನ ಮಕ್ಕಳು ಯೋಗದ ವಿವಿಧ ಭಂಗಿಗಳನ್ನು ನೃತ್ಯದ ಮೂಲಕ ಪ್ರದರ್ಶನ ಮಾಡಿ ಮಹತ್ವ ಸಾರಿದರು. ಭೂಮಿ ಸೇನಾ ಜೋಷಿ ಅವರ ಧ್ವನಿಯಲ್ಲಿ ಮಿಲೆ ಸುರ್ ಮೇರಾ ತುಮಾರಾ… ಹಾಡಿಗೆ ಮೈಸೂರಿನ ವಿಸ್‌ಡಮ್ ವಿಶೇಷ ಚೇತನ ಶಾಲೆಯ ಮಕ್ಕಳು ಪ್ರದರ್ಶನ ಮಾಡಿದ ಯೋಗ ನೃತ್ಯಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದಿಯಾಗಿ ನೆರೆದಿದ್ದವರು ಮನಸೋತು ಚಪ್ಪಾಳೆಗಳ ಮಳೆಗೈದರು.
ಸ್ವಾಮಿ ವಿವೇಕಾನಂದ ಯೋಗ ಸಮಿತಿಯ ಮಹಿಳೆಯರು ಕ್ಲಿಷ್ಟಕರ ಆಸನಗಳನ್ನು ನೃತ್ಯದಲ್ಲಿ ಜತೆಗೆ ತಂದು ಯೋಗ ಮತ್ತು ನೃತ್ಯವೂ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂದೇಶ ಸಾರಿದರು.
ಆಯುಷ್ ಆಯುರ್ವೇದಿಕ್ ವಿದ್ಯಾರ್ಥಿನಿಯರು ಯೋಗ ರೂಪದಲ್ಲಿ ಶಿವನ ಭಂಗಿಗಳನ್ನು ಸಾದರಪಡಿಸಿದರು. ವಿಜಯನಗರದ ಎಎಎಂ ಹಂಪಿಯ ಯೋಗಾ ವಿದ್ಯಾರ್ಥಿಗಳು ಕೂಡ ಯೋಗದ ಅನುಕೂಲಗಳನ್ನು ಸಾರಿದರು.