ನ್ಯೂನತೆಗಳ ನಡುವೆ ದಸರಾ ಯಶಸ್ವಿ

bfdcbefa-c093-4240-8b03-feacbf0068ad
Published on

ಆರ್.ಕೃಷ್ಣ ಮೈಸೂರು
ನಾಡಹಬ್ಬ ದಸರಾ ಈ ಬಾರಿಯೂ ಕೆಲ ನ್ಯೂನತೆಗಳ ನಡುವೆಯೂ ಯಶಸ್ವಿಯಾಗಿ ಅದ್ದೂರಿಯಾಗಿ ಮುಗಿದಿದೆ.
ದಸರಾದ ಪ್ರಮುಖ ಆಕರ್ಷಣೆ ಜಂಜೂಸವಾರಿ ಮೆರವಣಿಗೆಯನ್ನು ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೆ ಲಕ್ಷಾಂತರ ಜನರು ವೀಕ್ಷಿಸಿರು.
ಚಿನ್ನದ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ಮೂರ್ತಿವನ್ನು ಹೊತ್ತು ಗಾಂಭೀರ್ಯದಲ್ಲಿ ಅಭಿಮನ್ಯು ಹೆಜ್ಜೆ ಹಾಕಿ ಬರುತ್ತಿದ್ದಂತೆಯೇ ಜನರು ಜಯಘೋಷಣೆ ಮೊಳಗಿಸಿದ್ದಲ್ಲದೆ, ನಿಂತಲ್ಲೇ ಕೈ ಮುಗಿದು ತಮ್ಮ ಭಕ್ತಿಭಾವ ಪ್ರದರ್ಶಿಸಿದರು.
ಆದರೆ ಅರಮನೆ ಆವರಣದಲ್ಲಿ ಮೆರವಣಿಗೆ ಸಾಗುವಾಗ ಕಲಾತಂಡಗಳು, ಸ್ತಬ್ಧಚಿತ್ರಗಳ ಮುಂದೆ ನಾನಾ ಸಮಿತಿ ಸದಸ್ಯರು, ಎನ್‌ಸಿಸಿ, ಪೊಲೀಸರು ಅಡ್ಡಲಾಗಿ ನಿಂತಿದ್ದು ಕಿರಿಕಿರಿ ಎನಿಸಿತು. ಜತೆಗೆ ಎಂದಿನಂತೆ ದಸರೆ ಹತ್ತಿರವಾದಾಗ ಮಾಡುವ ತರಾತುರಿ ಸಿದ್ಧತೆ ಈ ಬಾರಿಯೂ ಕಂಡು ಬಂತು. ಸಾಕಷ್ಟು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳದೆ ಇದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬರಲಿಲ್ಲ ಎನ್ನುವ ಮಾತು ಕೇಳಿ ಬಂದವು.
ಅ.2ರಿಂದ 12ರ ವರೆಗೆ ಆಯೋಜಿಸಿದ್ದ 414ನೇ ದಸರಾ ಮಹೋತ್ಸವಕ್ಕೆ ಈ ಬಾರಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರ ಶಾಸಕರು ಇದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಅವರು, ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬಾರದು ಎಂದು ಮಾಡಿದ ಭಾಷಣ ದೊಡ್ಡ ಸುದ್ದಿಯಾಗಿ, ದಸರಾ ಉದ್ಘಾಟನೆಯನ್ನೇ ಗೌಣ ಮಾಡಿದಂತಿತ್ತು.
ಶಿಸ್ತಿಲ್ಲದ ಉದ್ದನೆಯ ಮೆರವಣಿಗೆ:
ದಸರಾದ ಹತ್ತನೇ ದಿನ ನಡೆಯುವ ಆಕರ್ಷಕ ಜಂಬೂಸವಾರಿ ಮೆರವಣಿಗೆ ಈ ಬಾರಿ ಅತಿ ಉದ್ದ ಇದ್ದುದ್ದಲ್ಲದೆ, ಅರಮನೆ ಆವರಣದಲ್ಲಿ ಶಿಸ್ತು ಇರಲಿಲ್ಲ.
ಸಾಮಾನ್ಯವಾಗಿ ನೂರರ ಅಸುಪಾಸು ಇರುತ್ತಿದ್ದ ಕಲಾತಂಡ, ಸ್ತಬ್ಧಚಿತ್ರಗಳ ಸಂಖ್ಯೆ ಈ ಬಾರಿ 150 ಆಗಿತ್ತು. ಕಲಾತಂಡದಲ್ಲಿ 30ಕ್ಕೂ ಹೆಚ್ಚು ಕಲಾಪ್ರಕಾರಗಳು ಪುನಾರವರ್ತನೆಗೊಂಡಿದ್ದವು.
ದಸರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುವಂತವು. ಅದರಲ್ಲೂ ಅರಮನೆ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಪಡೆಯಲು ಇನ್ನಿಲ್ಲದ ಒತ್ತಡ ರಾಜಕಾರಣಿಗಳು, ಅಧಿಕಾರಿಗಳ ಮೇಲಿರುತ್ತದೆ. ಹೀಗಾಗಿ ಈ ಬಾರಿ ಅರಮನೆ ವೇದಿಕೆಯಲ್ಲಿ ಹಿಂದಿನ ವರ್ಷಗಳಂತೆ ಹೆಚ್ಚು ಗಮನ ಸೆಳೆಯುವ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಮೂಡಿ ಬರಲಿಲ್ಲ ಎನ್ನುವ ಟೀಕೆಗಳು ಸಂಗೀತ ವಲಯದಲ್ಲಿ ಕೇಳಿ ಬಂತು. ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಗೆ 10 ದಿನವೂ ವಿಶೇಷ ಅಲಂಕಾರ, ಪೂಜೆಗಳು ನಡೆದವು.
ಖಾಸಗಿ ದರ್ಬಾರ್‌ಗಿಲ್ಲ ಪ್ರವೇಶ
ದಸರಾದಲ್ಲಿ ಅರಮನೆಯಲ್ಲಿ ವಿಶೇಷ ಪೂಜೆ, ಖಾಸಗಿ ದರ್ಬಾರ್ ಸಾಂಪ್ರಾಯಿಕವಾಗಿ ನಡೆದು ಬಂದಿದೆ. ಶರನ್ನವರಾತ್ರಿ ಆಚರಣೆಯ ಸಡಗರದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರು. ಚಿನ್ನದ ಕಂಕಣಧಾರಣೆ ಮಾಡಿದ ಯದುವೀರ್ ಅವರು 9 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿಖಾಸಗಿ ದರ್ಬಾರ್ ನಡೆಸಿದರು. ಆದರೆ ಈ ವರ್ಷವೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸುವ ಸಂದರ್ಭದಲ್ಲಿ ವಿದೇಶಿಗರು, ಗಣ್ಯರು ಸೇರಿದಂತೆ ಹಲವರಿಗೆ ಖಾಸಗಿ ದರ್ಬಾರ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿತ್ತು.


ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ

ದಸರಾ ಉದ್ಘಾಟನೆ ಸಂದರ್ಭ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನೀಡಲಾಗುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಈ ಬಾರಿ ಹಾವೇರಿ ಜಿಲ್ಲೆಯ ಖ್ಯಾತ ಶಹನಾಯಿ ವಾದಕ ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಪ್ರದಾನ ಮಾಡಲಾಯಿತು. ಅರಮನೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಅರಮನೆಯಲ್ಲಿ ಪುತ್ರೋತ್ಸವ
ಅರಮನೆಯಲ್ಲಿ ದಸರಾ ಸಂಭ್ರಮ ಒಂದೆಡೆಯಾದರೆ, ರಾಜವಂಶಸ್ಥರ ಕುಟುಂಬದಲ್ಲಿ ಪುತ್ರೋತ್ಸವದ ಸಂತಸ ಮನೆ ಮಾಡಿತ್ತು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾಕುಮಾರಿ ದಂಪತಿಗೆ ಎರಡನೇ ಗುಂಡು ಮಗುವಿನ ಜನನವಾಯಿತು. ದಸರಾ ಆರಂಭಗೊಂಡು ಯದುವೀರ್ ಕಂಕಣ ತೊಟ್ಟಿದ್ದರಿಂದ ಸೂತಕದ ನಡುವೆ ಸಾಂಪ್ರಾಯಿಕ ಪೂಜಾ ಕಾರ್ಯ ನೆರವೇರಿತು. ಆದರೆ ಕಂಕಣ ಬಿಚ್ಚಿದ್ದರಿಂದ ಅಂಬಾರಿಗೆ ಪುಷ್ಪಾರ್ಚನೆ ಮಾಡಲು ಯದುವೀರ್ ಗೈರಾಗಿದ್ದರು.

ಗಮನ ಸೆಳೆದ ದೀಪಾಲಂಕಾರ
ದಸರಾಕ್ಕೆ ಮೆರಗು ನೀಡುವ ವಿದ್ಯುತ್ ದೀಪಾಲಂಕಾರ ಈ ಬಾರಿ ಗಮನ ಸೆಳೆಯಿತು. ಎಲ್‌ಇಡಿ ಬಲ್ಪ್‌ಗಳ ಬಣ್ಣ, ಬಣ್ಣದ ಚಿತ್ತಾಕರ್ಷಕ ದೀಪಾಲಂಕಾರ ಆಕರ್ಷಕವಾಗಿರುವುದಲ್ಲದೆ, 10 ದಿನಗಳು ಹೆಚ್ಚುವರಿಯಾಗಿ ದೀಪಾಲಂಕಾರ ಮಾಡಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ದಸರಾ ಮುಗಿದ ಬಳಿಕ ದೀಪಾಲಂಕಾರವೂ ಮುಕ್ತಾಯವಾಗಿತ್ತು. ಆದರೆ ಈಬಾರಿ ಒಟ್ಟು 21 ದಿನಗಳ ಕಾಲ ದೀಪಾಲಂಕಾರ ಇರಲಿದೆ.

ದಸರಾದಲ್ಲಿ ಎಲ್ಲರಿಗೂ ಅವಕಾಶ ನೀಡಲು ರೈತ ದಸರಾ, ಮಕ್ಕಳ ದಸರಾ, ದಸರಾ ಕ್ರೀಡಾಕೂಟ, ಚಲನಚಿತ್ರೋತ್ಸವ, ವಿವಿಧೆಡೆ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಗಮನ ಸೆಳೆದವು.

ಆಹಾರ ಮೇಳ ಸ್ಥಳ ಬದಲಾವಣೆ
ಈ ಬಾರಿಯ ಆಹಾರ ಮೇಳದ ಸ್ಥಳವನ್ನು ಬದಲಾವಣೆ ಮಾಡಿ ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಆರಂಭದಲ್ಲಿ ಕಾಡಾ ಕಚೇರಿಯಲ್ಲಿ ನಡೆಯುತ್ತಿದ್ದ ಆಹಾರ ಮೇಳವನ್ನು ಸ್ಥಳಾವಕಾಶ ಕೊರತೆಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಬಾರಿ ಯುವ ದಸರಾವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸಿದ್ದರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು.
ಪುಸ್ತಕ ಮೇಳವನ್ನು ಕಾಡಾ ಕಚೇರಿ ಆವರಣದಲ್ಲಿ ಜನರ ಕೊರತೆ ಕಾರಣಕ್ಕೆ ಕಳೆದ ಬಾರಿ ಓವಲ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದರೂ ಪುಸ್ತಕ ಪ್ರೇಮಿಗಳು ಆಗಮಿಸಲಿಲ್ಲ ಎನ್ನುವ ಕೊರಗು ಈ ಬಾರಿಯೂ ಪ್ರಕಾಶಕರು, ಪುಸ್ತಕ ಮಾರಾಟಗಾರರಿಂದ ಕೇಳಿ ಬಂತು.

ಮೂರು ತಿಂಗಳ ಕಾಲ ಆಯೋಜಿಸಿರುವ ದಸರಾ ವಸ್ತು ಪ್ರದರ್ಶನ ಈ ಬಾರಿಯೂ ಬಹುತೇಕ ಸರ್ಕಾರಿ ಖಾಲಿ ಮಳಿಗೆಗಳೊಂದಿಗೆ ಉದ್ಘಾಟನೆಗೊಂಡಿತು. ಇನ್ನು ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಗಮನ ಸೆಳೆದರೂ, ಜನರಿಂದ ತುಂಬಿದ್ದ ಜಾತ್ರೆಯಂತಾಗಿತ್ತು. ಹೀಗಾಗಿ ಕಲಾಕೃತಿಗಳ ವೀಕ್ಷಣೆಗಿಂತ ಜನರನ್ನು ನೋಡುವುದೇ ಅಗಿತ್ತು.

ರಂಗು ತುಂಬಿದ ಯವ ದಸರೆ
ಮಹಾರಾಜ ಕಾಲೇಜು ಮೈದಾನದಲ್ಲಿ ಜಾಗ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ನಗರದ ಹೊರ ವಲಯ ಉತ್ತನಹಳ್ಳಿ ಬಳಿಯ ಮೈದಾನಕ್ಕೆ ಈ ಬಾರಿ ಯುವ ದಸರಾವನ್ನು ಸ್ಥಳಾಂತರಿಸಲಾಯಿತು. ಆದರೂ ಪ್ರೇಕ್ಷಕರ ವೀಕ್ಷಣೆ, ಜೋಶ್‌ಗೆ ಏನು ಕೊರತೆ ಇಲ್ಲದಂತೆ ದಸರೆಗೆ ರಂಗು ತುಂಬಿತ್ತು. ಖ್ಯಾತ ಗಾಯಕರಾದ ಶ್ರೇಯಾ ಘೋಷಾಲ್, ರವಿ ಬಸ್ರೂರು, ಬಾದ್ ಶಾ, ಎ.ಆರ್.ರೆಹಮಾನ್, ಇಳಯರಾಜ ಅವರ ಸಂಗೀತ ಸುಧೆಯಲ್ಲಿ ಯುವ ಸಮೂಹ ಶಿಳ್ಳೆ, ಕೇಕೆಯೊಂದಿಗೆ ಸಂಭ್ರಮದಲ್ಲಿ ಮಿಂದೆದ್ದಿತು.

ಪಂಜಿನ ಕವಾಯತು
ದಸರೆಯಲ್ಲಿ ಅಂತಿಮವಾಗಿ ನಡೆಯುವ ಪಂಜಿನ ಕವಾಯತು ಮಾಮೂಲಿನಂತೆ ರೋಮಾಂಚನಕಾರಿ ಬೈಕ್ ಪ್ರದರ್ಶನ, ಆಶ್ವಾರೋಹಿ ಪಡೆ, ಶಾಲಾ ವಿದ್ಯಾರ್ಥಿಗಳ ಕಲಾ ಪ್ರದರ್ಶನ, ವಿವಿಧ ಅಕ್ಷರಗಳನ್ನು ಜೋಡಿಸುವ ಪಂಜಿನ ಕವಾಯಿತು ನಡೆಯಿತು.

ಆದರೆ ನೂತನವಾಗಿ ಸೆಸ್ಕ್‌ನಿಂದ ಆಯೋಜಿಸಿದ್ದ 1500 ಡ್ರೋಣ್‌ಗಳಿಂದ ಮೂಡಿಸಿದ ವಿವಿಧ ಚಿತ್ತಾರ ಅತ್ಯಾಕರ್ಷಕವಾಗಿ ನೋಡುಗರಿಗೆ ವಿನೂತನವಾಗಿ ಕಂಡಿತು. ಹಿಂದಿನ ವರ್ಷಗಳಲ್ಲಿ ನಡೆಯುತ್ತಿದ್ದ ಏರ್ ಶೋ ಪ್ರದರ್ಶನ ಈ ಬಾರಿ ರಕ್ಷಣಾ ಇಲಾಖೆಯೊಂದಿಗೆ ಸರಿಯಾದ ಸಂಪರ್ಕ ಸಾಧಿಸಲು ಸಾಧ್ಯವಾಗದೆ ರದ್ದುಗೊಂಡಿತು.

ಪಂಚ ಕವಿಗೋಷ್ಠಿ

ಕವಿಗೋಷ್ಠಿ ಉಪ ಸಮಿತಿ ಆಯೋಜಿಸುವ ಕವಿಗೋಷ್ಠಿಯು ಕೆಲವೊಂದು ವಿವಾದಕ್ಕೆ ಕಾರಣವಾಯಿತು. ದಸರಾ ಉದ್ಘಾಟಿಸಿದ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರನ್ನೇ ಕವಿಗೋಷ್ಠಿ ಉದ್ಘಾಟನೆಗೂ ಆಹ್ವಾನಿಸಲಾಗಿದೆ ಎಂದು ಒಂದೆಡೆಯಾದರೆ, ಮತ್ತೊಂದೆಡೆ ಈ ಹಿಂದೆ ಅವಕಾಶ ನೀಡಿದ ಕವಿಗಳಗೆ ಮತ್ತೆ ಮಣೆ ಹಾಕಲಾಗಿದೆ ಎನ್ನುವ ಮಾತು ಕೇಳಿ ಬಂದವು. ಸಮರಸ, ಸಮನತಾ, ಸಂತಸ, ಸಮಷ್ಟಿ, ಸಮೃದ್ಧ ಎನ್ನುವ ಹೆಸರಿನಿಂದ ಆಯೋಜಿಸಿದ್ದ ಪಂಚ ಕಾವ್ಯೋತ್ಸವದಲ್ಲಿ ಮಕ್ಕಳು, ಮಹಿಯರು, ಬಹುಭಾಷ ಕವಿಗಳು, ಮಂಗಳಮುಖಿಯರು, ಹಿರಿಯ ಸಾಹಿತಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

ಮಿತಿ ಮೀರಿದ ಸಮಿತಿ ಸದಸ್ಯರು

ದಸರೆಯಲ್ಲಿ ಸಾಮಾನ್ಯವಾಗಿ 50 ಒಳಗೆ ಸಮಿತಿ ಸದಸ್ಯನ್ನು ನೇಮಕ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ವಿವಿಧ 9 ಉಪ ಸಮಿತಿಗಳಿಗೆ ತಲಾ 150ರ ಅಸುಪಾಸಿನಲ್ಲಿ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಮೈಸೂರು ನಗರ ಅಲ್ಲದೆ, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ತಿ.ನರಸೀಪುರ ಕ್ಷೇತ್ರದರಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ ಎನ್ನುವ ಅಸಮಧಾನ ಕಾರ್ಯಕರ್ತರಿಂದಲೇ ಕೇಳಿ ಬಂತು.

ಕಲರ್ ಜೆರಾಕ್ಸ್ ಕಾಟ

ಅರಮನೆಯಲ್ಲಿ ಜಂಜೂಸವಾರಿ ವೀಕ್ಷಿಸಲು ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲವರು ಆ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿಸಿದ್ದರು. ಆದರೆ ಜಿಲ್ಲಾಡಳಿತದಿಂದ ನೀಡಿದ ಪಾಸ್‌ಗಳಿಗೆ ಬಾರ್ ಕೋಡ್ ವ್ಯವಸ್ಥೆ ಇದ್ದುದ್ದಿರಂದ ಅದನ್ನು ಸ್ಕಾೃನ್ ಮಾಡಿ ಒಳಗೆ ಬಿಡಲಾಗುತ್ತಿತ್ತು. ಜೆರಾಕ್ಸ್ ಪ್ರತಿಗಳು ಬಾರ್ ಕೋಡ್ ಸ್ಕಾೃನ್ ತೆಗೆದುಕೊಳ್ಳದೆ ಅವರೆಲ್ಲ ಸಿಕ್ಕಿ ಬಿದ್ದರಿಂದ ಪೊಲೀಸರು ಅವರನ್ನು ಬೆದರಿಸಿ ವಾಪಸ್ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net