

ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಸಿಸಿಎಫ್‌ಗಳಾದ ರಮೇಶ್, ಮಾಲತಿಪ್ರಿಯಾ, ಡಿಸಿಎಫ್‌ಗಳಾದ ಡಾ.ಐ.ಬಿ.ಪ್ರಭುಗೌಡ, ಬಸವರಾಜು, ಆರ್‌ಎಫ್‌ಒ ಸಂತೋಷ್ ಹೂಗಾರ್, ವೈದ್ಯ ಮುಜೀಬ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.
ಅರಮನೆ ಅರ್ಚಕ ಪ್ರಹ್ಲಾದರಾವ್ ಆನೆಗಳ ಪಾದಗಳಿಗೆ ಅರಿಶಿನ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಸೇವಂತಿಗೆ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.
ಆನೆಗಳುಗೆ ಪಂಚಫಲ- ನಿಸುಗಳನ್ನು ನೈವೇದ್ಯ ನೀಡಲಾಯಿತು. ಕೋಡುಬಳೆ ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ ಗಣೇಶನ ಇಷ್ಟದ ತಿನಿಸುಗಳನ್ನು ನೀಡಲಾಯಿತು. ಅಧಿಕಾರಿಗಳು, ಮಾವುತರು, ಕಾವಾಡಿಗರಿಗೆ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಆನೆಗಳಿಗೆ ಬಿಲ್ವಪತ್ರೆ, ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಈ ವೇಳೆ ಅಧಿಕಾರಿಗಳು ಆನೆಗಳಿಗೆ ಆರತಿ ಬೆಳಗಿದರು.