

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಪ್ರವಾಸೋದ್ಯಮಕ್ಕೆ ಯಾವುದೇ ಕಾರಣಕ್ಕೂ ಹಿನ್ನಡೆಯಾಗದಂತೆ ಈ ಬಾರಿ ಸಾಂಪ್ರದಾಯಿಕ ದಸರಾವನ್ನು ಪ್ರಾಯೋಜಕತ್ವದ ಮೂಲಕ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.
ರಾಜ್ಯದಲ್ಲಿ ಬರದ ಪರಿಣಾಮದಿಂದ ದಸರಾ ಮಹೋತ್ಸವವನ್ನು ಅದ್ಧೂರಿಯೂ ಅಲ್ಲದ, ಸರಳವೂ ಅಲ್ಲದ ಸಾಂಪ್ರದಾಯಿಕವಾಗಿ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದಸರಾವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಾಯೋಜಕತ್ವ ಪಡೆದುಕೊಳ್ಳುವವರಿಗೆ ಸರ್ಕಾರ ಕೆಲವು ಸೂಚನೆ ನೀಡಿದೆ. ನಿಯಮಗಳಿಗೆ ಬದ್ಧವಾಗಿರುವವರಿಂದ ಪ್ರಯೋಜಕತ್ವ ಪಡೆದುಕೊಳ್ಳಲಾಗುತ್ತಿದೆ. ಹಲವರು ಮುಂದೆ ಬಂದಿದ್ದು, ಅವುಗಳ ಪರಿಶೀಲನೆ ಸಹ ನಡೆಯುತ್ತಿದೆ ಎಂದು ತಿಳಿಸಿದರು.
ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ 15 ಕೋಟಿ. ರೂ. ಹಣ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಬಿಡುಗಡೆಯಾಗಿದೆ. ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ರೂ. ಮುಡಾದಿಂದ 10 ಕೋಟಿ ಬಳಸಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವ ವಾಹನಗಳಿಗೆ ತೆರಿಗೆ ವಿನಾಯಿತಿ ಕುರಿತು ಸರ್ಕಾರ ಶೀಘ್ರ ಕ್ರಮ ವಹಿಸಲಿದೆ ಎಂದು ಹೇಳಿದರು.