

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಿದ್ದು, ಎಲ್ಲ ಸಿದ್ಧತೆ ಕೈಗೊಳ್ಳಲು ಅಧಿಕಾರಿ, ಸಿಬ್ಬಂದಿ ಕಾರ್ಯಪ್ರೌವೃತ್ತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಸೂಚನೆ ನೀಡಿದರು.
ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಕಿರಂಗೂರು ವೃತ್ತದ ದಸರಾ ಬನ್ನಿಮಂಟಪಕ್ಕೆ ಮಂಗಳವಾರ ಭೇಟಿ ನೀಡಿ ಪೂರ್ವತಯಾರಿ ಕುರಿತು ಪರಿಶೀಲಿಸಿ ಮಾತನಾಡಿ, ಅ. 3ರಿಂದ ಪಾರಂಪರಿಕ ದಸರಾ ಆಚರಣೆ ಪ್ರಾರಂಭವಾಗಲಿದ್ದು, ದಸರಾ ಬನ್ನಿಮಂಟಪ ಆವರಣ ಸೇರಿದಂತೆ ಸುತ್ತಮುತ್ತ ಸ್ವಚ್ಛತೆ, ಕಟ್ಟಡಕ್ಕೆ ಸುಣ್ಣ-ಬಣ್ಣ ಮಾಡಿಸಬೇಕು. ಮಂಟಪದ ರಕ್ಷಣೆಗೆ ಸುತ್ತಲೂ ತಂತಿ ಬೇಲಿ ಅಳವಡಿಕೆ ಹಾಗೂ ಜನರಿಗೆ ಕುಡಿಯುವ ನೀರು ಪೂರೈಕೆಗೆ ತೊಂಬೆನಲ್ಲಿ ನಿರ್ಮಾಣಕ್ಕೆ ಕಿರಂಗೂರು ಗ್ರಾಮ ಪಂಚಾಯಿತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿ ಎಂದು ಸಲಹೆ ನೀಡಿದರು.
ಉಳಿದಂತೆ ಅಗತ್ಯವಿರುವ ಕಾಮಗಾರಿ ಹಾಗೂ ಸಿದ್ಧತೆಗಳ ಕುರಿತು ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತನ್ನಿ ಎಂದು ತಾಪಂ ಒಇ ವೇಣು ಹಾಗೂ ಪಿಡಿಒ ಪ್ರಶಾಂತ್‌ಬಾಬು ಅವರಿಗೆ ತಿಳಿಸಿದರು. ಜಿಪಂ ಸಹಾಯಕ ನಿರ್ದೇಶಕ ಮೃತ್ಯುಂಜಯ ಇತರರು ಹಾಜರಿದ್ದರು.