

ಮಡಿಕೇರಿ:
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ದಸರಾ ಸಮಿತಿಗಳೊಂದಿಗೆ ಸಹಕರಿಸುವ ಮೂಲಕ ಅತ್ಯಂತ ವ್ಯವಸ್ಥಿತವಾಗಿ, ಯಶಸ್ವಿ ದಸರಾ ಆಚರಣೆ ಮಾಡುವಂತೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯ ಭದ್ರತೆಯನ್ನು ಪಿ.ಡಬ್ಲ್ಯೂ.ಡಿ ಇಲಾಖೆ ಅಧಿಕಾರಿಗಳು ಗಮನಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು.
ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೂಕ್ತ ಸಿದ್ಧತೆ ಮಾಡಬೇಕು. ಕಾರ್ಯಕ್ರಮ ವ್ಯಾಪ್ತಿಯ ೧೦೦-೨೦೦ ಮೀಟರ್ ವ್ಯಾಪ್ತಿಯಲ್ಲಿ ಅಗ್ನಿಶಾಮಕ ದಳವನ್ನು ನಿಯೋಜಿಸಬೇಕು. ದಸರಾ ದಿನಗಳಲ್ಲಿ ನಿರಂತರ ವಿದ್ಯುತ್ ಪೂರೈಸಲು ಸೆಸ್ಕ್ ಇಲಾಖೆಗೆ ಕ್ರಮ ಕೈಗೊಳ್ಳಬೇಕು. ವೇದಿಕೆಯಲ್ಲಿ ಅಲಂಕಾರಿಕ ಹೂ ಕುಂಡ ವ್ಯವಸ್ಥೆಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೆಕು.ವೇದಿಕೆಯ ಬಳಿ ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು. ಆಂಬುಲೆನ್ಸ್ ವಾಹನ ಸಿದ್ದವಿರಬೇಕು. ಮಡಿಕೇರಿ ಮತ್ತು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗಳಲ್ಲಿ ೨೪ ಗಂಟೆ ವೈದ್ಯರು ಸಿದ್ಧರಿರಬೇಕು ಮಡಿಕೇರಿ, ಗೋಣಿಕೊಪ್ಪ ನಗರದ ಎಲ್ಲಾ ಭಾಗಗಳಲ್ಲಿಯೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಸಾಂಸ್ಕೃತಿಕ, ಕ್ರೀಡಾ, ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾವನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದರಲ್ಲದೆ ಮಡಿಕೇರಿ ನಗರದ ಅನೇಕ ಭಾಗಗಳಲ್ಲಿ ಹೆಚ್ಚಿನ ಸಿ.ಸಿ.ಕ್ಯಾಮೆರಾ ಅಳವಡಿಸಲು ಮನವಿ ಮಾಡಿದರು.
ಈ ಬಾರಿ ಸರಕಾರ ಇದುವರೆಗೆ ದಸರಾಕ್ಕೆ ರೂ. ೭೫ ಲಕ್ಷಕ್ಕೆ ಬಜೆಟ್ ನೀಡಿದೆ. ಇರುವ ಹಣದಲ್ಲಿಯೇ ವ್ಯವಸ್ಥಿತ ದಸರಾವನ್ನು ನಡೆಸಲಾಗುತ್ತದೆ. ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ನಿರೀಕ್ಷೆ ಮಾಡಲಾಗಿದೆ. ದಸರಾ ಪ್ರಯುಕ್ತ ನಗರದಲ್ಲಿ ೧೦ ದಿನಗಳ ಕಾಲವೂ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದರು.
ದಸರಾ ಸಮಿತಿ ಗೌರವ ಅಧ್ಯಕ್ಷ ಜಿ.ಚಿದ್ವಿಲಾಸ್ ಮಾತನಾಡಿ ಸಹಸ್ರಾರು ಮಂದಿ ಪ್ರವಾಸಿಗರು ಆಗಮಿಸುವುದರಿಂದ ತುರ್ತು ಸಹಾಯವಾಣಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿದರು. ರಾಜಸೀಟನ್ನು ರಾತ್ರಿ ಪೂರ್ತಿ ದಸರಾ ದಿನ ತೆರೆಯುವ ಮೂಲಕ ಪ್ರವಾಸಿ ದಟ್ಟಣೆ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.
ದಶ ಮಂಟಪಗಳ ತೀರ್ಪುಗಾರರಿಗೆ ಮುಂಜಾಗ್ರತ ಕ್ರಮವಾಗಿ ಭದ್ರತಾ ವ್ಯವಸ್ಥೆಯನ್ನು ನೀಡಬೇಕು. ಹಾಗೆಯೇ ತೀರ್ಪುಗಾರರನ್ನು ಕರೆತರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಬೇಕು ಎಂದರು.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಅಕ್ಟೋಬರ್ ೧೬ ರಿಂದ ೨೪ರ ವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಲು ಸಾಂಸ್ಕೃತಿಕ ಸಮಿತಿ ಸಿದ್ಧವಾಗಿದೆ. ಈಗಾಗಲೇ ಕಲಾವಿದರು ಮತ್ತು ಕಲಾತಂಡಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಕ್ಟೋಬರ್ ೧೬ರಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ. ಅ. ೧೯ ರಂದು ಜಾನಪದ ದಸರಾ, ೨೦ ರಂದು ಮಕ್ಕಳ ದಸರಾ, ೨೨ರಂದು ಮಹಿಳಾ ದಸರಾ ನಡೆಯಲಿದೆ. ವಿಜಯದಶಮಿ ದಿನ ಖ್ಯಾತ ಟೆನ್ನಿಸ್ ತಾರೆ ಕೊಡಗಿನ ರೋಹನ್ ಬೋಪಣ್ಣ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ ದಶಮಂಟಪದ ಅನುದಾನ ದಸರಾ ಆರಂಭಕ್ಕೆ ಮುನ್ನವೇ ಸಿಗಬೇಕು ಎಂದು ಜಿಲ್ಲಾಧಿಕಾರಿಯೊಂದಿಗೆ ಕೋರಿದರು. ದಸರಾ ಸಮಿತಿ ಪದಾಧಿಕಾರಿ ಎಂ.ಬಿ.ದೇವಯ್ಯ, ಪ್ರಮುಖರಾದ ಕೆ.ಎಸ್ ರಮೇಶ್, ಅಬ್ದುಲ್ ರಜಾಕ್. ಅರುಣ್ ಶೆಟ್ಟಿ ಎ.ಸಿ.ದೇವಯ್ಯ, ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ಬೈ.ಶ್ರೀ.ಪ್ರಕಾಶ್ ಮಾತನಾಡಿ ಅನೇಕ ಸಲಹೆಗಳನ್ನು ನೀಡಿದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಸುಂದರರಾಜ್, ಮಡಿಕೇರಿ ದಸರಾ ಸಮಿತಿ ಕಾರ್ಯಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ,