

ಮಡಿಕೇರಿ:
ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾವನ್ನು ಪರಂಪರೆಯಂತೆ ಆಚರಿಸಲು ಸರ್ಕಾರ ಸಕಲ ಸಹಕಾರ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೊಸರಾಜು ಹೇಳಿದರು. ಮಡಿಕೇರಿ ದಸರಾ ಉತ್ಸವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳು ಮತ್ತು ವಿವಿಧ ಉಪಸಮಿತಿ ಪ್ರಮುಖರ ಜತೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಐತಿಹಾಸಿಕ ಆಚರಣೆ ಆಗಿರುವ ಮಡಿಕೇರಿ ದಸರಾ ಮುಂದುವರಿಯಬೇಕು. ಇದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಕಳೆದ ವರ್ಷದ ಬಾಕಿ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಜತೆ ಮಾತನಾಡಲಾಗುವುದು. ಈ ಬಾರಿಯ ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ದಸರಾ ವೀಕ್ಷಿಸಲು ಆಗಮಿಸುವವರಿಗೆ ಪ್ರಾಥಮಿಕ ಸೌಲಭ್ಯ ಒದಗಿಸಬೇಕಾಗುತ್ತದೆ. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಲಕ್ಷಾಂತರ ಜನ ಬರುವುದರಿಂದ ಎಚ್ಚರಿಕೆ ತೆಗದುಕೊಳ್ಳಬೇಕು. ಮಡಿಕೇರಿಗೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಮಾಜಿ ಶಾಸಕರು ಸೇರಿದಂತೆ ಎಲ್ಲಾ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳ ಸಹಕಾರದಿಂದ ಪಕ್ಷಬೇಧ ಮರೆತು ದಸರಾ ಯಶಸ್ವಿಗೊಳಿಸಬೇಕು ಎಂದರು.
ಇದ್ಕಕೂ ಮೊದಲು ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಡಿಕೇರಿ ದಸರಾದ ಸಂಕ್ಷಿಪ್ತ ವಿವರಣೆಯನ್ನು ಉಸ್ತುವಾರಿ ಸಚಿವರಿಗೆ ನೀಡಿದರು. ಮಡಿಕೇರಿ ದಸರಾದಲ್ಲಿ ೧೦ ಮಂಟಪ ೪ ಕರಗಗಳು ಇರುತ್ತವೆ. ಈ ವರ್ಷ ಅ.೧೫ ರಿಂದ ಅ.೨೪ ತನಕ ದಸರಾ ಕಾರ್ಯಕ್ರಮಗಳು ನಡೆಯಲಿದೆ. ಆ.೨೧ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಬರುತ್ತಾರೆ. ಹೊಸ ವೇದಿಕೆ, ಶಾಮಿಯಾನ ಆಗಬೇಕು. ಮಡಿಕೇರಿ ನಗರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ಹದಗೆಟ್ಟಿರುವ ರಸ್ತೆ ದುರಸ್ತಿ ಆಗಬೇಕು. ಯುದ್ಧೋಪಾದಿಯಲ್ಲಿ ಕೆಲಸ ನಡೆಯಬೇಕಿದೆ. ಬೀದಿ ದೀಪ, ಪೈಂಟಿಂಗ್ ಕೆಲಸ ಆಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಈಗಾಗಲೇ ಮುಖ್ಯಮಂತ್ರಿ ಭೇಟಿ ಮಾಡಲಾಗಿದೆ. ಬರ ಇರುವುದರಿಂದ ಖುಷಿಯಲ್ಲಿ ದಸರಾ ಮಾಡಲು ಕಷ್ಟ ಆಗಬಹುದು ಎಂದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಮಡಿಕೇರಿ ದಸರಾಕ್ಕೆ ೨೦೦ ವರ್ಷಗಳ ಇತಿಹಾಸ ಇದೆ. ೯ ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಸ್ಥಳಿಯರ ಪ್ರತಿಭೆ ಪ್ರದರ್ಶನಕ್ಕೂ ಇಲ್ಲಿ ಅವಕಾಶ ಕೊಡಲಾಗುತ್ತದೆ. ಪ್ರತಿ ವರ್ಷವೂ ೨೫-೩೦ ಲಕ್ಷ ರೂ. ವೇದಿಕೆಗೆ ಖರ್ಚು ಬರುತ್ತದೆ. ಹಾಗಾಗಿ ಶಾಶ್ವತ ವೇದಿಕೆ ಅಗತ್ಯ ಇದೆ. ಸರ್ಕಾರದಿಂದ ಬರುವ ಅನುದಾನ ಅವಲಂಬಿಸಿಯೇ ಕಾರ್ಯಕ್ರಮ ನಡೆಸಲಾಗುತ್ತದೆ. ಕಳೆದ ವರ್ಷ ೧ ಕೋಟಿ ರೂ. ಸಿಗುವ ನಿರೀಕ್ಷೆಯಲ್ಲಿ ಹಣ ಖರ್ಚು ಮಾಡಲಾಗಿತ್ತು. ೭೫ ಲಕ್ಷ ರೂ. ಮಾತ್ರ ಬಂದಿದೆ. ಬಾಕಿ ಇರುವ ಮೊತ್ತ ಬಿಡುಗಡೆ ಆಗಬೇಕು. ಈ ಬಾರಿ ೨ ಕೋಟಿ ರೂ. ಅನುದಾನ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಅಚಾರ್ಯ ಮಾತನಾಡಿ ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಕಾಲದಲ್ಲೂ ಸಂಪ್ರದಾಯ ನಿಲ್ಲಿಸಿರಲಿಲ್ಲ. ಈ ವರ್ಷ ಬರದ ಕಾರಣ ನೀಡಿ ಸಿಎಂ ಕಡಿಮೆ ಹಣದ ಭರವಸೆ ಕೊಟ್ಟಿದ್ದಾರೆ. ಶಾಸಕರು ಮತ್ತು ಸಚಿವರು ಮುತುವರ್ಜಿ ವಹಿಸಿ ಹೆಚ್ಚಿನ ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯದರ್ಶಿ ರಾಜೇಶ ಯಲ್ಲಪ್ಪ ಮಾತನಾಡಿ ದಶಮಂಟಪಗಳಿಗೆ ಹೆಚ್ಚಿನ ಅನುದಾನ ಬೇಕು. ಈ ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಣ ಬಿಡುಗಡೆ ಆಗುತ್ತಿತ್ತು. ಇದರ ಬದಲು ನಗರಸಭೆ ಆಯುಕ್ತರ ಖಾತೆಗೆ ಅನುದಾನ ಬರಬೇಕು ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಮತ್ತೊಮ್ಮೆ ಉಪಸಮಿತಿಗಳ ಸಭೆ ಕರೆದು ಕೂಲಂಕಷ ಚರ್ಚೆ ಮಾಡಲಾಗುವುದು ಎಂದು ಹೇಳಿದರು. ಪ್ರಮುಖರಾದ ಅರುಣ್ ಶೆಟ್ಟಿ, ಮಹೇಶ್ ಜೈನಿ, ರಾಕೇಶ್, ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ಚುಮ್ಮಿದೇವಯ್ಯ ವಿವಿಧ ಸಲಹೆಗಳನ್ನು ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ಪ್ರಸಾದ್, ಜಿಲ್ಲಾ ಎಸ್.ಪಿ. ರಾಮರಾಜನ್, ಸಿಇಒ ವರ್ಣಿತ್ ನೇಗಿ ಇದ್ದರು.