ಜನಮನ ರಂಜಿಸಿದ ದಸರಾ ಕವಿಗೋಷ್ಠಿ

Dussehra Poetry Concert which entertained the public
Published on

ಮಡಿಕೇರಿ:

ಸಂಗೀತ ಮತ್ತು ಸಾಹಿತ್ಯಕ್ಕೆ ತುಂಬಾ ಶಕ್ತಿ ಇದ್ದು, ಜೀವನವನ್ನೇ ಬದಲಿಸುವ ಮಾರ್ಗ ತೋರಿಸಬಲ್ಲದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎಂ. ಅರ್. ಚರಣ್ ರಾಜ್ ಹೇಳಿದರು. ಮಡಿಕೇರಿ ದಸರಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಬುಧವಾರ ನಡೆದ ದಸರಾ ಕವಿಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕಲೆ ಸರಳವಾಗಿರಬೇಕು ಆದರೆ ಗಾಢವಾಗಿರಬೇಕು. ಆಳವಾದ ಅಧ್ಯಯನದಿಂದ ಮಾತ್ರ ಇದು ಸಾಧ್ಯ ಎಂದ ಮೂಲತಃ ಕೊಡಗಿನ ವಿರಾಜಪೇಟೆಯವರಾದ ಚರಣ್‌ರಾಜ್ ತಮ್ಮ ಬದುಕಿನ ಮೇಲೆ ಮಡಿಕೇರಿ ದಸರಾದ ಕಾರ್ಯಕ್ರಮಗಳು ಮಾಡಿದ ಪರಿಣಾಮಗಳನ್ನು ಹಂಚಿಕೊAಡರು. ಕೊಡಗಿನ ಜೀವನ, ಇಲ್ಲಿನ ಶ್ರೀಮಂತ ಸಂಸ್ಕೃತಿ ಜೀವನವನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದರು.

ಕವಿಗೋಷ್ಠಿಗೆ ಚಾಲನೆ ನೀಡಿದ ಸೋಮವಾರಪೇಟೆ ತಾಲೂಕು ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ದಸರಾದಲ್ಲಿ ದೇಸೀಯತೆಯ ಪರಿಮಳ ಇರುತ್ತದೆ. ಇದು ಗ್ರಾಮೀಣ ಸೊಗಡಿನ ಹಬ್ಬ. ದಸರಾ ಒಂದು ಸಂಭ್ರಮ. ಜಗತ್ತು ಬದಲಾವಣೆ ಆಗುತ್ತಿದೆ. ಇಂಥ ಬದಲಾವಣೆ ಮಧ್ಯೆಯೂ ದಸರಾ ಪರಂಪರೆ ನಡೆದುಕೊಂಡು ಬಂದಿದೆ. ದೈವಿಕ ನೆಲೆಗಟ್ಟಿನ ಆಧಾರದಲ್ಲಿ ಮಡಿಕೇರಿ ದಸರಾ ಆಚರಿಸಲಾಗುತ್ತಿದೆ. ಇಲ್ಲಿಯ ಕವಿಗೋಷ್ಠಿಯಲ್ಲಿ ಮಂಡನೆ ಆಗುವ ಕವನಗಳು ಸಮಾಜಮುಖಿ ಚಿಂತನೆಯಿAದ ಕೂಡಿರಬೇಕು. ಸುಲಲಿತ ಭಾಷೆ ಇರಬೇಕು. ಅಧ್ಯಯನ, ಆಳವಾದ ಗ್ರಹಿಕೆ ಇರಬೇಕು. ಬರಹದಿಂದ ಸಮಾಜದ ಬದಲಾವಣೆ ಸಾಧ್ಯ ಎನ್ನುವಂತಿರಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ಕೊಡಗಿನ ಭಾಷಾ ವೈವಿಧ್ಯತೆ ಬಿಂಬಿಸುವ ಬಹುಭಾಷಾ ಕವಿಗೋಷ್ಠಿ ದಸರಾ ಹಿನ್ನೆಲೆಯಲ್ಲಿ ನಡೆಯುತ್ತಿರುವುದು ಖುಷಿಯ ವಿಷಯ. ಸಾಹಿತ್ಯದ ಕೆಲಸಗಳು ಸಮಾಜದಲ್ಲಿ ನಮ್ಮನ್ನು ಗುರುತಿಸುತ್ತದೆ. ಕನ್ನಡದ ಸಾಹಿತ್ಯ, ಸಾಹಿತಿಗಳ ಬಗ್ಗೆ ಹೊರ ಜಗತ್ತಿಗೆ ಗೊತ್ತಾಗಬೇಕು. ಇಲ್ಲಿಯ ಸಾಹಿತ್ಯ ಬೇರೆ ಭಾಷೆಗಳಿಗೆ ಭಾಷಾಂತಾರವಾಗಬೇಕು. ಬೇರೆ ಭಾಷೆಯವರೂ ಓದುವಂತಾಗಬೇಕು. ಒಳ್ಳೆ ಕೆಲಸಗಳು ದಾಖಲೀಕರಣ ಆಗಬೇಕು. ಈ ಕೆಲಸ ಕವಿಗೋಷ್ಠಿ ಸಮಿತಿಯಲ್ಲಿ ಆಗಿದೆ. ಮುಂದೆ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ಸಿಗುವಂತಾಗಬೇಕು. ಕವಿತೆ, ಸಣ್ಣಕತೆ ರಚನೆ ಸ್ಪರ್ಧೆ ಮಾಡಿದರೆ ಒಳಿತು ಎಂದರು.

ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಮಾತನಾಡಿ, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ಕೊಡಲಾಗಿದೆ. ಕವಿಗೋಷ್ಠಿಗಳು ಕವಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಮಾತ್ರವಲ್ಲ. ಭಾಷೆ ಬೆಳವಣಿಗೆಗೆಸಹಕಾರಿಯೂ ಹೌದು. ಜೀವನೋತ್ಸಾಹವನ್ನೂ ತುಂಬುತ್ತದೆ ಎಂದು ಹೇಳಿದರು.


ಮಡಿಕೇರಿ ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ., ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಸದಸ್ಯ ಟಿ.ಜಿ. ಪ್ರವೀಣ್ ಇದ್ದರು.
ಕವಿಗೋಷ್ಢಿಯಲ್ಲಿ ವಾಚನ ಮಾಡಿದ ಕವನಗಳನ್ನು ಒಳಗೊಂಡ 'ಕಾವ್ಯೋದ್ಯಾನ' ಕವನ ಸಂಕಲನವನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು.

ಸಮಾರೋಪ ಸಮಾರಂಭ:
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಕವನ ರಚನೆ ಆರಂಭಿಸಿದ ನಂತರವೂ ಭಾವನೆಗಳು ಅರಳುವಂತೆ ಇರಬೇಕು. ಒಂದು ವಸ್ತು ನೋಡಿ ಭಾವ ಉದ್ಭವ ಆದರೆ ಅದು ಸಹಜ ಭಾವ. ಭಾವನೆಗಳ ಸಹಜತೆಯೊಂದಿಗೆ ಬದುಕಬೇಕು. ಪಕ್ವತೆ ಬೆಳೆಸಿಕೊಂಡಷ್ಟು ಪರಿಪೂರ್ಣ ಆಗಿರಲು ಪ್ರಯತ್ನಿಸಬೇಕು. ಬರವಣಿಗೆ ಸಂದರ್ಭ ಇಹದ ಎಲ್ಲಾ ಜಂಜಡಗಳನ್ನು ಮರೆಯಬೇಕು ಎಂದರು.
ಸಾಹಿತಿ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಕವನ ಎಲ್ಲಿ ಬೇಕಾದರೂ ಹುಟ್ಟಬಹುದು. ದುಃಖದಲ್ಲಿ ಅರಳುವ ಕವನಗಳು ಮನೋಜ್ಞವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ದಸರಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್, ಅಬ್ದುಲ್ ಕೌಸರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net