

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ವಿದ್ಯುತ್ ದೀಪಾಲಂಕಾರ ಬುಧವಾರ ಕೊನೆಗೊಂಡಿತು.
ಸೆ.26ರಿಂದ ಅ.5ರವರೆಗೆ ದಸರಾ ಅದ್ದೂರಿಯಾಗಿ ನೆರವೇರಿತ್ತು. ಪ್ರವಾಸಿಗರಿಗಾಗಿ ದೀಪಾಲಂಕಾರ ಅವಧಿಯನ್ನು ಅ.12ರವರೆಗೂ ವಿಸ್ತರಣೆ ಮಾಡಲಾಗಿತ್ತು.
ಸತತ 16 ದಿನಗಳ ಕಾಲ ಮೈಸೂರಿನಲ್ಲಿ ಝಗಮಗಿಸಿದ ದೀಪಾಲಂಕಾರವನ್ನು ಲಕ್ಷಾಂತರ ಜನ ವೀಕ್ಷಿಸಿ ಖುಷಿಪಟ್ಟರು. ಅಂತಿಮ ದಿನವಾದ ಬುಧವಾರವೂ ಅಪಾರ ಜನ ದೀಪಾಲಂಕಾರ ವೀಕ್ಷಿಸಿ ಸಂಭ್ರಮಿಸಿದರು. ಕಡೆದಿನ ನಗರದ ಹೃದಯ ಭಾಗದ ಹೊರತಾಗಿ ಇತರೆ ರಸ್ತೆಗಳಿಗೆ ಮಾಡಿದ್ದ ದೀಪಾಲಂಕಾರಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಅರಮನೆ ಸುತ್ತಿನ ರಸ್ತೆಯಲ್ಲಿ, ಸಯ್ಯಜಿರಾವ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಅಶೋಕರಸ್ತೆ, ಇರ್ವಿನ್ ರಸ್ತೆ, ಬಿಎನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆಯಲ್ಲಿ ಮಾತ್ರ ದೀಪಾಲಂಕಾರ ಇತ್ತು.