

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರು ಸೋಮವಾರದಿಂದ ವಿದ್ಯುತ್ ದೀಪಗಳಿಂದ ಕಂಗೊಳಿ ಸಲಿದೆ. ಈಗಾಗಲೇ ಪ್ರಯೋಗಾರ್ಥ ನಗರದ ಎಲ್ಲ ರಸ್ತೆಗಳು ಹಾಗೂ ವೃತ್ತಗಳಲ್ಲಿ ವಿದ್ಯುತ್ ದೀಪಗಳು ಬೆಳಗಲು ಪ್ರಾರಂಭಿಸಿದ್ದು, ಪ್ರತಿಯೊಬ್ಬರ ಕಣ್ಮನ ಸೆಳೆಯುತ್ತಿದೆ.
ದೀಪಾಲಂಕಾರವೂ ಈ ಹಿಂದಿನಿಗಿಂತಲೂ ಆಕರ್ಷಕ, ಅದ್ದೂರಿಯಾಗಿ ಮಾಡಲಾಗಿದೆ. ಅದಕ್ಕಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಈ ಬಾರಿ ಹೊಸ ವಿನ್ಯಾಸದೊಂದಿಗೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ದಸರಾವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರನ್ನು ಆಕರ್ಷಿಸಲು ಅಪರೂಪದ ವಿದ್ಯುತ್ ದೀಪಾಲಂಕಾರ ರೂಪಿಸಲಾಗಿದೆ.
ರಸ್ತೆಯಲ್ಲಿ 120 ಕಿ.ಮೀ. ದೀಪಾಲಂಕಾರ: ಕಳೆದ ಬಾರಿ ನಗರದಲ್ಲಿ 120 ಕಿ.ಮೀ., 98 ವೃತ್ತಗಳು, 27 ಇತರ, 59 ವಿವಿಧ ಪ್ರತಿಕೃತಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾ ಗಿತ್ತು. ಈ ಬಾರಿ 136 ಕಿ.ಮೀ ರಸ್ತೆ, 118 ವೃತ್ತ ವೃತ್ತಗಳು, 60 ಆಕೃತಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಮೈಸೂರಿನ ಹೃದಯ ಭಾಗದ ಪ್ರಮುಖ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ 118 ವೃತ್ತಗಳಿಗೂ ಬೆಳಗುವ ವಿದ್ಯುತ್ ದೀಪಗಳ ಮೂಲಕ ಅಲಂಕಾರ ಮಾಡಲಾಗಿದೆ.
ನಗರದ ಪ್ರಮುಖ ತಾಣವಾಗಿರುವ ದೊಡ್ಡಕೆರೆ ಮೈದಾನ, ಗನ್‌ಹೌಸ್ ವೃತ್ತ, ರಾಮಸ್ವಾಮಿ ವೃತ್ತ, ಕೌಟಿಲ್ಯ ವೃತ್ತ, ಎಲ್‌ಐಸಿ ಕಚೇರಿ ವೃತ್ತ, ಮುಡಾ ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಜಂಕ್ಷನ್, ರೈಲ್ವೆ ನಿಲ್ದಾಣದ ವೃತ್ತ, ಚಲುವಾಂಬ ಆಸ್ಪತ್ರೆ ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ಹೈವೇ ವೃತ್ತ, ಫೌಂಟೇನ್ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ವರ್ಣರಂಜಿತ ಲೈಟ್‌ಗಳಿಂದ ವಿವಿಧ ಆಕೃತಿ ನಿರ್ಮಿಸಲಾಗಿದೆ.
ದೀಪಾಲಂಕಾರದ ಮೆರುಗು ಹೆಚ್ಚಿಸಲು ಈ ಸಲ ಹೊರ ರಾಜ್ಯಗಳಿಂದ ಅತ್ಯಾಕರ್ಷಕ ವಿದ್ಯುತ್ ಬಲ್ಬ್ ತರಿಸಿ ಅಳವಡಿಸಲಾಗಿದೆ. ಈ ಬಲ್ಬ್‌ಗಳು ಚಲಿಸುವಂತೆ ಗೋಚರವಾಗುವುದರಿಂದ ವಿವಿಧ ಆಕೃತಿಗಳಿಗೆ ಕಾಂತಿ ಬರಲಿದೆ. ಈ ಲೈಟ್‌ಗಳಿಂದ ತ್ರಿವರ್ಣ ಧ್ವಜ ಹಾರಾಡುವಂತೆ, ವಾಹನಗಳ ಆಕೃತಿಯಲ್ಲಿ ಚಕ್ರಗಳು ಚಲಿಸುವಂತೆ, ವಿವಿಧ ಗೊಂಬೆ ಆಕೃತಿಗಳು ಚಲನಶೀಲತೆಯಿಂದ ಕಾಣಲಿವೆ.
6 ಕೋಟಿ ರೂ. ಬಜೆಟ್: ವಿದ್ಯುತ್ ದೀಪಾಲಂಕಾರದಲ್ಲಿ ಲಕ್ಷಾಂತರ ಬಲ್ಬ್ ಬೆಳಗುವುದರಿಂದ 2.50 ಲಕ್ಷ ಯೂನಿಟ್ ವಿದ್ಯುತ್ ಬೇಕಾಗಲಿದೆ. ದಸರಾ ದೀಪಾಲಂಕಾರಕ್ಕಾಗಿ ಈ ಬಾರಿ 6 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕಳೆದ ಬಾರಿ 6.15 ಕೋಟಿ ರೂ. ವೆಚ್ಚವಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಈ ಸಲ 15 ಲಕ್ಷ ರೂ. ಕಡಿಮೆಯಾಗಿದೆ.
ದೀಪಾಲಂಕಾರದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ದೀಪಾಲಂಕಾರ ನೋಡಲು ಪ್ರವಾಸಿಗರು ಮುಗಿಬೀಳುವುದ ರಿಂದ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲು ಹಾಗೂ ವಿದ್ಯುತ್ ಅವಘಡ ತಪ್ಪಿಸಲು ಅಗತ್ಯ ಕ್ರಮ ವಹಿಸಲು ಗುತ್ತಿಗೆದಾರ, ಸೆಸ್ಕ್ ಸಿಬ್ಬಂದಿಗೆ ಸೂಚಿಸಲಾಗಿದೆ. ಜೋತು ಬೀಳುವ ವಯರ್‌ಗಳು ಎಲ್ಲಿಯೂ ಡ್ಯಾಮೇಜ್ ಆಗಿರದಂತೆ ನೋಡಿಕೊಳ್ಳುವಂತೆ, ದೀಪಾಲಂಕಾರದ ವೇಳೆ ನಿತ್ಯ ಸಂಜೆ ವೇಳೆ ತಪಾಸಣೆ ಮಾಡುವಂತೆಯೂ ನಿರ್ದೇಶಿಸಲಾಗಿದೆ. ನಗರದಲ್ಲಿ ಜನ ಮತ್ತು ವಾಹನಗಳ ದಟ್ಟಣೆ ತಪ್ಪಿಸಲು, ಪ್ರವಾಸಿಗರ ಅನುಕೂಲಕ್ಕಾಗಿ ದೀಪಾಲಂಕಾರ ವೇಳೆಯನ್ನು ಸಂಜೆ 7ರಿಂದ 10ರ ವರೆಗೆ ನಿಗದಿಪಡಿಸಲಾಗಿದೆ.
4 ದಿನ ಡ್ರೋನ್ ಶೋ
ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಕಣ್ಮನ ಸೆಳೆದ ಡ್ರೋನ್ ಪ್ರದರ್ಶನ ಈ ಸಲವೂ ಇರಲಿದೆ. ಎಲ್ಲರ ಆಕರ್ಷಣೆ ಮತ್ತು ಮೆಚ್ಚುಗೆ ಪಡೆದಿದ್ದರಿಂದ ಡ್ರೋನ್ ಶೋ ಕುರಿತು ಈ ಸಲ ಜನರ ನಿರೀಕ್ಷೆಗಳು ಹೆಚ್ಚಿದೆ. ಆದ್ದರಿಂದ ಈ ಸಲ ಅಂದಾಜು 3 ಸಾವಿರ ಡ್ರೋನ್‌ಗಳು ಬಾನಿನಲ್ಲಿ ಚಿತ್ತಾರ ಮೂಡಿಸಲಿವೆ. ಸೆ.28 ಮತ್ತು 29ರಂದು ಪ್ರಾಯೋಗಿಕ ಪ್ರದರ್ಶನ, ಅ.1 ಮತ್ತು 2ರಂದು ಮುಖ್ಯ ಪ್ರದರ್ಶನ ನಡೆಯಲಿದೆ