

ಮೈಸೂರು: ದಸರಾ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಅ.1ರಂದು ಜೆ.ಕೆ.ಮೈದಾನದಲ್ಲಿ ನಡೆಯಲಿದೆ ಎಂದು ರೈತ ದಸರಾ ಉಪ ವಿಶೇಷಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಕೃಷ್ಣರಾಜು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿವರಿಸಿದ ಅವರು, ಸೆ.29ರಂದು ಗೋಪಾಲಕರು ಹಸುಗಳೊಂದಿಗೆ ಆಗಮಿಸಬೇಕು. 30ರಂದು ವಿಶ್ರಾಂತಿ, ಅ.1ರಂದು ಸ್ಪರ್ಧೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಡಿ.ನಾಗಭೂಷಣ ಮಾತನಾಡಿ, ಸಂಘದಿಂದ ಪ್ರತಿ ವರ್ಷ ಶ್ರೀನಿವಾಸ್ ತೂಗುದೀಪ್ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. 5 ವರ್ಷಗಳಿಂದ ದಸರಾದಲ್ಲೂ ಸ್ಫರ್ಧೆ ನಡೆಯುತ್ತಿದೆ. ಕರೊನಾದಿಂದ 3 ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗಿಲ್ಲ ಎಂದು ನುಡಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಮೋಸ ಇದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸ್ಥಳದಲ್ಲಿಯೇ ವೈದ್ಯರಿರಬೇಕು. ನಗರದ ಐವರು ಹಿರಿಯ ಗೋಪಾಲಕರನ್ನು ಸನ್ಮಾನಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕೃಷ್ಣರಾಜು, ಎಲ್ಲ ವ್ಯವಸ್ಥೆ ಮಾಡುತ್ತೇವೆ. ರೈತ ದಸರಾ ಉದ್ಘಾಟನೆ ದಿನ ಪ್ರತಿ ತಾಲೂಕಿನ ಒಬ್ಬರು ಗೋಪಾಲಕರನ್ನು ಅಭಿನಂದಿಸಲಾಗುವುದು. ಹಾಲು ಕರೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ವೇಳೆ ನಗರದ ಐವರು ಗೋಪಾಲಕರನ್ನು ಸನ್ಮಾನಿಸುವುದಾಗಿ ತಿಳಿಸಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ 50 ಸಾವಿರ ರೂ., ದ್ವಿತೀಯ 40 ಸಾವಿರ ರೂ., ತೃತೀಯ 30 ಸಾವಿರ ರೂ., 20 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ ಎಂದು ವಿವರಿಸಿದರು.