ದಸರಾ ಜಂಬೂಸವಾರಿಯಲ್ಲಿ ದಕ್ಷಿಣ ಕಾಶಿ ದರ್ಶನ

Dussehra Jambooswari
ದಸರಾ ಜಂಬೂಸವಾರಿ
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೆಲಮಂಗಲ ತಾಲೂಕು ಶಿವಗಂಗೆಯ ಸ್ತಬ್ಧಚಿತ್ರ ವಿಶೇಷವಾಗಿ ಗಮನ ಸೆಳೆಯುವ ಜತೆಗೆ ಜನಸಾಗರಕ್ಕೆ ಗ್ರಾಮಾಂತರ ಜಿಲ್ಲೆಯ ‘ದಕ್ಷಿಣ ಕಾಶಿ’ಯ ದರ್ಶನ ಮಾಡಿಸಿತು.
ಅ.24 ರಂದು ನಡೆದ ಜಂಬೂಸವಾರಿಯಲ್ಲಿ 31 ಜಿಲ್ಲೆಯ ಜಿಲ್ಲಾ ಪಂಚಾಯಿತಿಯಿಂದ ಆಯಾ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ ಹಾಗೂ ವಿಶೇಷವಾಗಿ ಐತಿಹಾಸಿಕ ಮಾನ್ಯತೆ ಪಡೆದ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಗಿತ್ತು. ಇಷ್ಟು ಜಿಲ್ಲೆಗಳ ಸ್ತಬ್ಧಚಿತ್ರದ ನಡುವೆ ಗ್ರಾಮಾಂತರ ಜಿಲ್ಲೆಯಿಂದ ಪ್ರಾಕೃತಿಕ ಸೌಂದರ್ಯವನ್ನು ಹೊದ್ದಿರುವ ನಯನಮನೋಹರ ಐತಿಹಾಸಿಕ ತಾಣ ಶಿವಗಂಗೆಯ ಸ್ತಬ್ಧಚಿತ್ರವನ್ನು ಜಂಬೂಸವಾರಿಯಲ್ಲಿ ಜನ ಕಣ್ತುಂಬಿಕೊಂಡರು. ಮೈಸೂರಿನ ಎಪಿಎಂಸಿ ಮೈದಾನದಲ್ಲಿ ದಸರಾ ಉತ್ಸವ ಸಮಿತಿ ನಿಗದಿಪಡಿಸಿದ್ದ ಜಾಗದಲ್ಲಿ ಸ್ತಬ್ಧಚಿತ್ರ ರೂಪುಗೊಂಡಿತ್ತು. ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕ ಮಹಮದ್ ರಫೀಕ್ ಉಸ್ತುವಾರಿಯಲ್ಲಿ ಸ್ತಬ್ಧಚಿತ್ರ ರೂಪುಗೊಂಡಿತ್ತು. ಕಳೆದ ದಸರಾ ಜಂಬೂಸವಾರಿಯಲ್ಲಿ ಗ್ರಾಮಾಂತರ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಗಂಗರಸರ ರಾಜಧಾನಿ ಮಣ್ಣೆ (ಮಾನ್ಯಖೇಡ) ಸ್ತಬ್ಧಚಿತ್ರ ವಿಶೇಷವಾಗಿ ಗಮನ ಸೆಳೆದಿತ್ತು. ಮುಂದಿನ ಬಾರಿಯ ಪಟ್ಟಿಯಲ್ಲಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಮಾಕಳಿ ದುರ್ಗಾ, ದೇವನಹಳ್ಳಿಯ ಕೊಯಿರಾ, ಹುಲುಕುಡಿ ಬೆಟ್ಟ, ದೇವನಹಳ್ಳಿ ಕೋಟೆ ಮತ್ತಿತರ ಐತಿಹಾಸಿಕ ಸ್ಥಳಗಳ ಹೆಸರಿದ್ದು, ಯಾವುದಕ್ಕೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅದೃಷ್ಟ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ದಕ್ಷಿಣ ಕಾಶಿ ಮರುಸೃಷ್ಟಿ:
ಸ್ತಬ್ಧಚಿತ್ರದಲ್ಲಿ ನಂದಿ ಎದುರು ಆಸೀನರಾಗಿರುವ ಶಿವಪಾರ್ವತಿಯ ದರ್ಶನ, ನಂತರದಲ್ಲಿ ಹೊನ್ನಮ್ಮದೇವಿ ಗಂಗಾಧರೇಶ್ವರ ದೇಗುಲ, ಬೆಟ್ಟದ ಮಧ್ಯೆ ಸಿಗುವ ಗೋಪುರಗಳು, ಬೆಟ್ಟದ ತುದಿಯಲ್ಲಿರುವ ಬಸವಣ್ಣನ ವಿಗ್ರಹ, ಕುದುರೆ ಮೇಲೆ ಹೊರಟಿರುವ ನಾಡಪ್ರಭು ಕೆಂಪೇಗೌಡರ ಚಿತ್ರಣ, ಸುತ್ತಮುತ್ತಲ ಬೆಟ್ಟದ ವಿಹಂಗಮ ಚಿತ್ರಣ, ಕಡೆಯಲ್ಲಿ ನಂದಿ ಆಸೀನವಾಗಿರುವ ಪ್ರವೇಶದ್ವಾರದ ಚಿತ್ರಣದಲ್ಲಿ ದಕ್ಷಿಣ ಕಾಶಿಯ ಮರುಸೃಷ್ಟಿಯನ್ನು ಜನ ಕಣ್ತುಂಬಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net