

ಶಿವಮೊಗ್ಗ: ಶಕ್ತಿ ರೂಪವಾಗಿ ದುರ್ಗಾ ಪೂಜೆ ಮಾಡಲಾಗುತ್ತದೆ. ಅದು ಕೂಡ ನಮ್ಮ ಒಳಗಡೆಯೇ ಇದೆ. ರಾಕ್ಷಸರು ಕೂಡ ನಮ್ಮ ಒಳಗೇ ಇದ್ದಾರೆ. ಕೆಟ್ಟದ್ದು ಎಂದರೆ ರಾಕ್ಷಸ ಎಂದರ್ಥ. ಹಾಗಾಗಿ ಕೆಟ್ಟದ್ದನ್ನು ನಾಶ ಮಾಡುವ ಸಂಸ್ಕೃತಿಯೇ ದಸರಾ ಆಚರಣೆ ಎಂದು ಸಿನಿಮಾ ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿ ಹೇಳಿದರು.
ನಗರದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾವಣನ ನಾಶ ಎಂದರೆ ಕೆಟ್ಟದ್ದರ ನಾಶ ಎಂದರ್ಥ. ರಾವಣ ಬಹಳ ಮೇಧಾವಿ, ಕಲಾವಂತ, ಶಿವಭಕ್ತ, ಒಳ್ಳೆಯ ಆಡಳಿತಗಾರ. ಆದರೆ ಅವನಲ್ಲಿ ಅಹಂಕಾರವಿತ್ತು. ಅದು ಎಲ್ಲ ವಿದ್ಯೆಗಳಿಗೂ ಮಸಿ ಬಳಿದಂತೆ ಆತನನ್ನೇ ಸರ್ವನಾಶ ಮಾಡಿತು. ನಾವಿಂದು ವಿಜಯ ದಶಮಿ ವೇಳೆ ಸಾಂಕೇತಿಕವಾಗಿ ರಾವಣ ದಹನ ಮಾಡುತ್ತೇವೆ. ಆದರೆ ನಮ್ಮೊಳಗೂ ರಾವಣ, ರಾಮ ಇಬ್ಬರೂ ಇದ್ದಾರೆ. ಅದು ಸಕಾರಾತ್ಮಕ, ನಕಾರಾತ್ಮಕ ಸಂಘರ್ಷವಾಗಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರೈತರ ಮುಖದಲ್ಲಿ ಸಂತೋಷ ಇದ್ದರೆ ಎಲ್ಲ ಬೆಳವಣಿಗೆ ಕಾಣಲು ಸಾಧ್ಯ. ಈ ಬಾರಿ ಸಮೃದ್ಧ ಮಳೆ ಆಗಿದ್ದು, ಚಾಮುಂಡೇಶ್ವರಿ ತಾಯಿ ಆಶೀರ್ವಾದದಿಂದ ಎಲ್ಲರಿಗೂ ಮಾನಸಿಕ, ದೈಹಿಕ ಶಕ್ತಿ ಸಿಗುವಂತೆ ಆಗಲಿ ಎಂದು ಆಶಿಸಿದರು.
ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿ, ದೇವರು ನಂಬಿ ಜೀವನ ಸಾಗಬೇಕು. ಇಲ್ಲವಾದರೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ನಾಡಿನ ಜನರಿಗೆ ದೇವರು ಸುಖ, ನೆಮ್ಮದಿ, ಸಮೃದ್ಧಿ ಸಿಗಲಿ ಎಂದು ಆಶಿಸಿದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಮೈಸೂರು ಬಿಟ್ಟರೆ ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಅದ್ದೂರಿ ದಸರಾ ಆಚರಣೆ ಮಾಡಲಾಗುತ್ತದೆ. ದುಷ್ಟ ಶಕ್ತಿ ಹೋಗಲಾಡಿಸಿ, ಶಿಷ್ಟ ಶಕ್ತಿ ಪಡೆಯಲು ದಸರಾ ಆಚರಣೆ ಮಾಡುತ್ತಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ವಿದ್ವಾನ್ ಶಂಕರಾನಂದ ಜೋಯ್ಸ ಇತರರಿದ್ದರು.
ಚಾಮುಂಡೇಶ್ವರಿ ದೇವಿಗೆ ಕಾಸಿನ ಸರ
ನಾಗರಿಕರ ನಾಡಹಬ್ಬ ದಸರಾವನ್ನು ಎಂದಿನಂತೆ ಅದ್ದೂರಿಯಾಗಿ ಮಾಡುತ್ತಿದ್ದೇವೆ. ಹಣ ಇಲ್ಲವೆಂದು ಯೋಚನೆ ಮಾಡುತ್ತಲೇ 68 ನಾನಾ ಬಗೆಯ ಚಟುವಟಿಕೆ ಮಾಡುತ್ತಿದ್ದೇವೆ. ಈ ಬಾರಿ ದೇವಿಗೆ ಕಾಸಿನ ಸರ ಮಾಡಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಎಲ್ಲ ದೇವಾನುದೇವತೆಗಳು ಒಟ್ಟಿಗೆ ಬನ್ನಿ ಮುಡಿಯುವ ಕಾರ್ಯ ಮಾಡುವುದು ಶಿವಮೊಗ್ಗದಲ್ಲಿ ಮಾತ್ರ. ದಸರಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಘೋಷಣೆ ಮಾಡಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 2 ಕೋಟಿ ರೂ. ಕೊಟ್ಟಿದ್ದರು. ನಂತರ 1 ಕೋಟಿ ರೂ. ಕೊಟ್ಟಿದ್ದರು. ಕಳೆದ ಬಾರಿ ಸರ್ಕಾರ 20 ಲಕ್ಷ ರೂ. ಕೊಟ್ಟಿತ್ತು ಎಂದರು.