ದಸರಾ ಸರಳವೋ, ಅದ್ದೂರಿಯೋ ?

Dussehra is simple or grand
Published on

ಮಡಿಕೇರಿ:

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸಂಭ್ರಮ ಸರಿಯಲ್ಲ ಎನ್ನುವ ಕಾರಣ ಕೊಟ್ಟು ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ. ಮೈಸೂರಿನಲ್ಲಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಸರ್ಕಾರವೂ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಕೊಡಗಿನಲ್ಲಿ ಕೂಡ 3 ತಾಲೂಕುಗಳಲ್ಲಿ ತೀವ್ರ ಬರ, ಒಂದು ತಾಲೂಕಿನಲ್ಲಿ ಸಾಧಾರಣ ಬರ ಘೋಷಿಸಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಆಚರಣೆ ಬರದ ಕಾರ್ಮೋಡ ದಟ್ಟವಾಗಿ ಕಾಣಿಸಿಕೊಂಡಿದೆ. ಎರಡೂ ಕಡೆಯೂ ಜನೋತ್ಸವವಾಗಿ ದಸರಾ ಆಚರಿಸಲಾಗುತ್ತದೆ. ಸಾರ್ವಜನಿಕರ ವಂತಿಗೆ ಹಣ ಮತ್ತು ಸರ್ಕಾರದ ಅನುದಾನ ಅವಲಂಬಿಸಿ ದಸರಾವನ್ನು ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ.

ಸರ್ಕಾರದ ಅನುದಾನಕ್ಕಾಗಿ ಈಗಾಗಲೇ ದಸರಾ ಸಮಿತಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬಂದಿವೆ. ಮಡಿಕೇರಿ ದಸರಾಕ್ಕೆ 2 ಕೋಟಿ ರೂ. ಅನುದಾನದ ಬೇಡಿಕೆ ಇಡಲಾಗಿದೆ. ಆದರೆ, ಅಷ್ಟು ಹಣ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ತಿಳಿಸಿದ್ದಾರೆ. ಸರ್ಕಾರದಿಂದ ಎಷ್ಟು ಅನುದಾನ ಬರುತ್ತದೆ ಎನ್ನುವುದರ ಬಗ್ಗೆ ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ನೇತೃತ್ವದಲ್ಲಿ ನಡೆದ ದಸರಾ ಸಿದ್ಧತಾ ಸಭೆಯಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ. ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾವನ್ನು ಪರಂಪರೆಯAತೆ ಆಚರಿಸಲು ಸರ್ಕಾರ ಸಕಲ ಸಹಕಾರ ನೀಡಲಿದೆ ಎಂದಷ್ಟೇ ಹೇಳಿದ್ದಾರೆ.

ದಸರಾ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನ ಅಗತ್ಯವಾಗಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣಕ್ಕೆ ಉಪಸಮಿತಿಗಳು ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗಿದೆ. ಸಾಂಸ್ಕೃತಿಕ ಸಮಿತಿ ಸೇರಿದಂತೆ ಹೆಚ್ಚು ಖರ್ಚು ಬರುವ ಉಪಸಮಿತಿಗಳಿಗೆ ಇದರಿಂದ ಸಮಸ್ಯೆ ಆಗಿದೆ. ಮಡಿಕೇರಿ ದಸರಾಕ್ಕೆ ಕಳೆದ ವರ್ಷ ಸರ್ಕಾರ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರೂ 75 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿದ್ದು, 25 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಹಾಗಾಗಿ, ಸಾಲಗಾರರಾಗಿ ಮುಂದುವರಿಯುವ ಆತಂಕ ಉಪಸಮಿತಿಗಳನ್ನು ಕಾಡುತ್ತಿದೆ.

ಇಷ್ಟೆಲ್ಲದರ ಮಧ್ಯೆ ಜಿಲ್ಲೆಯಲ್ಲಿ ಸರಳ ದಸರಾ ಆಚರಣೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಹುತೇಕರು ದಸರಾವನ್ನು ವಿಜೃಂಭಣೆಯಿAದ ಆಚರಿಸುವುದರ ಪರವಾಗಿ ಇದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅನುಕೂಲ ಆಗುತ್ತದೆ. ಕೊಡಗಿನ ಆರ್ಥಿಕತೆಗೆ ಅನುಕೂಲ ಆಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸರಳ ದಸರಾ ಆಚರಣೆಗೆ ಒಲವು ತೋರಿಸುತ್ತಿರುವವರೂ ಇದ್ದಾರೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.

ಧಾರ್ಮಿಕ ಆಚರಣೆಗಳು ಯಾವಾಗಲೂ ಸರಳವಾಗಿರಬೇಕು. ಭಕ್ತಿಯಿಂದ ಅಚರಿಸಿದರೆ ಅರ್ಥವಿರುತ್ತದೆ. ಅಬ್ಬರದ ಡಿಜೆ ಸೌಂಡ್‌ನಿAದ ರೋಗಿಗಳು, ಮಕ್ಕಳು ಪರದಾಡಬೇಕಾಗುತ್ತದೆ. ವೃದ್ಧರಿಗೆ ಹೃದಯಾಘಾತವಾದ ನಿದರ್ಶನಗಳಿವೆ. ಈಗ ಜಿಲ್ಲೆಯಲ್ಲಿ ಬರಗಾಲವಿದೆ. ದಸರಾ ಆಚರಣೆಗಳು ಸರಳವಾಗಿದ್ದರೆ ಉತ್ತಮ.
ಕೆ.ಪಿ. ದಿನೇಶ್, ಕೃಷಿಕ, ಗರಗಂದೂರು ನಿವಾಸಿ.

ಈಗಿನ ದಸರಾ ಮೋಜು ಮಸ್ತಿಗೆ ಸೀಮಿತವಾಗುತ್ತಿದ್ದು. ಕೊಡಗಿನ ಸಂಸ್ಕೃತಿ ಆಚಾರ ವಿಚಾರಕ್ಕೆ ಒತ್ತು ಕಡಿಮೆಯಾಗುತ್ತಿದೆ. ಈ ವರ್ಷದ ದಸರಾದಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ಕೊಡಗಿನ ಜಾನಪದ ಸಂಸ್ಕೃತಿ ಆಚಾರ ವಿಚಾರಕ್ಕೆ ಸಂಬAಧಿಸಿದ ಪ್ರದರ್ಶನಗಳು ಹೆಚ್ಚಾಗಿ ಕಂಡು ಬರುವಂತಾಗಬೇಕು. ದಶಮಂಟಪಗಳ ಪ್ರದರ್ಶನ ಪೈಪೋಟಿಗಾಗಿ ಬಹುಮಾನಕ್ಕಾಗಿ ಯಾವುದೋ ಒಂದು ಸ್ಥಳದಲ್ಲಿ ಪ್ರದರ್ಶಿತವಾಗದೆ ಜನಸಾಮಾನ್ಯರು ವೀಕ್ಷಿಸುವಂತಾಗಬೇಕು.
ಕಣಜಾಲು ಪೂವಯ್ಯ, ಸಾಹಿತಿ, ಚೆಟ್ಟಳ್ಳಿ ಗ್ರಾಮ

ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾವನ್ನು ಸರಳವಾಗಿ ಆಚರಿಸಬಾರದು, ಹಿಂದಿನ ವರ್ಷದಂತೆ ಅದ್ಧೂರಿಯಾದ ಆಚರಣೆಮಾಡಲು ಸರ್ಕಾರ ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಪ್ರವಾಸೋದ್ಯಮ ಹಾಗೂ ವಾಣಿಜ್ಯ ವಹಿವಾಟುಗಳಿಗೆ ತೊಂದರೆ ಉಂಟಾಗಲಿದೆ
ರೀನಾ ತುಳಸಿ, ಮಾಜಿ ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ಸಿದ್ದಾಪು

ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಈ ಹಿಂದೆಯೂ ಹಲವು ಬಾರಿ ಇಂತಹ ಸ್ಥಿತಿ ಇದ್ದರೂ ನಾಡ ಹಬ್ಬ ದಸರಾ ಆಚರಣೆಗೆ ತೊಂದರೆಯಾಗಿರಲಿಲ್ಲ. ಇಂತಹ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ದೇವರುಗಳಲ್ಲಿ ಮುಂದೆ ಇಂತಹ ಪರಿಸ್ಥಿತಿ ಕೊಡಬೇಡ ಎಂದು ಬೇಡಿಕೊಳ್ಳುವುದು ಸೂಕ್ತ. ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎನ್ನುವ ನೋವು ಮರೆಯಲು ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು.
ಶ್ವೇತಾ ವಿನಯ್, ರಾಮಸ್ವಾಮಿ ಕಣಿವೆ.

ದಸರಾವನ್ನು ಇಷ್ಟು ವರ್ಷ ವಿವಿಧ ಕಾರಣಗಳಿಂದ ಸರಳವಾಗಿ ಆಚರಿಸಲಾಯಿತು. ಈ ಬಾರಿ ಕೂಡ ಅದ್ಧೂರಿ ದಸರಾ ಎಂದು ಹೇಳಿ ಈಗ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಆದರೆ ಈಗ ಸರಳವಾಗಿ ಆಚರಿಸುವುದು ಬೇಸರ ತಂದಿದೆ. ಸರ್ಕಾರ ಆಗುವಷ್ಟು ಅನುದಾನ ನೀಡಿ ಅದ್ಧೂರಿ ಆಚರಣೆಗೆ ಅನುವು ಮಾಡಿಕೊಡಬೇಕು.
ಬಿ.ಇ. ಕಿರಣ್ ಗೌರವಾಧ್ಯಕ್ಷ, ಶ್ರೀ ಶಾರದಾಂಬ ದಸರಾ ಸಮಿತಿ, ಅರ್ವತೋಕ್ಲು

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಹಬ್ಬಕ್ಕೆ ವಿಶೇಷವಾದ ಹಿನ್ನೆಲೆ ಇದ್ದು ಪ್ರತಿ ವರ್ಷ ಅದ್ಧೂರಿಯಾಗಿ ನೆರವೇರುತ್ತಿದೆ. ಈ ಬಾರಿ ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಆಚರಿಸದೇ ಸರಳವಾಗಿ ಆಚರಿಸುವ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ ಈ ರೀತಿಯಾಗಬಾರದು. ಪ್ರತಿ ವರ್ಷದಂತೆ ಈ ವರ್ಷವೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದ ರೀತಿಯಲ್ಲಿ ಆಚರಣೆ ನಡೆಯಬೇಕು. ಧಾರ್ಮಿಕ ಪೂಜಾ ವಿದಿವಿಧಾನಕ್ಕೆ ಯಾವುದೇ ಕಡಿವಾಣ ಹಾಕದಿರಲಿ.
ರುಮಾನ ಜಬೀರ್, ಸಾಹಿತಿ, ಕೊಡ್ಲಿಪೇಟೆ

ನಾಡಹಬ್ಬವನ್ನು ಕೊಡಗಿನಲ್ಲಿ ಸರಳವಾಗಿ ಆಚರಿಸಿದ್ದೇ ಆದಲ್ಲಿ ಅದು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಬಹುದು. ಇಲ್ಲಿನ ಪ್ರವಾಸೋದ್ಯಮ ಆಧಾರಿತ ವಹಿವಾಟಿಗೂ ಬರ ಬರುವ ಸಾಧ್ಯತೆ ಹೆಚ್ಚಿದೆ. ಕೊಡಗಿನ ದಸರಾ ಉತ್ಸವಕ್ಕೆ ಬರದ ನೆಪದಲ್ಲಿ ಸರ್ಕಾರ ತಣ್ಣೀರು ಎರಚದಿರಲಿ. ವಾರ್ಷಿಕ ದೊಡ್ಡ ಹಬ್ಬದಂತಿರುವ ದಸರಾವನ್ನು ಸಡಗರದಿಂದ ಆಚರಿಸುವ ಮೂಲಕ ಕೊಡಗಿನ ಜನತೆಯ ಜೀವನೋತ್ಸಾಹ ಮತ್ತು ಲವಲವಿಕೆಗೂ ಸರ್ಕಾರ ಕಾರಣವಾಗಲಿ. ಇಷ್ಟಕ್ಕೂ ಬೇರೆ ಜಿಲ್ಲೆಗಳ ಉತ್ಸವಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ದಸರಾ ಆಚರಣೆಗೆ ಹೆಚ್ಚೇನೂ ವೆಚ್ಚ ಇಲ್ಲ. ಮಡಿಕೇರಿಗೆ 2 ಕೋಟಿ, ಗೋಣಿಕೊಪ್ಪಲುವಿಗೆ 1 ಕೋಟಿ ಸೇರಿದಂತೆ 3 ಕೋಟಿ ರೂ. ಮಾತ್ರ ವೆಚ್ಚವಾದೀತು ಅಷ್ಟೇ..
ಅನಿಲ್ ಎಚ್.ಟಿ., ಅಧ್ಯಕ್ಷ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ

ಮಡಿಕೇರಿಯಲ್ಲಿ ದಸರಾ ಹಬ್ಬಕ್ಕೆ ಸುಮಾರು 200 ವರ್ಷಗಳ ಇತಿಹಾಸ ಇದ್ದು ಸಂಪ್ರದಾಯದAತೆ ಸಂಭ್ರಮದಿAದ ದಸರಾ ಹಬ್ಬ ಆಚರಿಸಬೇಕು. ಇದರಿಂದ ಸಾರ್ವಜನಿಕರ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಲು ಸಹಕಾರಿಯಾಗುತ್ತದೆ. ಸರ್ಕಾರದಿಂದ ಬರುವ ಅನುದಾನದ ಆಧಾರದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ರಸ್ತೆ ಸರಿಪಡಿಸಲು, ನಗರದ ಬನ್ನಿ ಮಂಟಪ, ಹಲವಾರು ಕಡೆಗಳಲ್ಲಿ ಸುಣ್ಣ ಬಣ್ಣ ಹಾಕುವ ಕೆಲಸಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಳೆ ನಿಂತ ಕೂಡಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭವಾಗುತ್ತದೆ.
ಅನಿತಾ ಪೂವಯ್ಯ, ಅಧ್ಯಕ್ಷೆ, ಮಡಿಕೇರಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net