ಸಂಸ್ಕೃತಿ ಬಿಂಬಿಸುವ ಆಚರಣೆ ದಸರಾ

DSC_2115
Published on

ದಸರಾ ಎನ್ನುವುದು ಕುಣಿತಕ್ಕೆ, ಸಂತೋಷಕ್ಕೆ ಸೀಮಿತವಲ್ಲ. ನಮ್ಮ ಸಂಸ್ಕೃತಿ ಬಿಂಬಿಸುವ ಆಚರಣೆ. ಹಾಗಾಗಿ, ಇದು ವಿಶ್ವವಿಖ್ಯಾತಿ ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿಯಲ್ಲಿ ಶುಕ್ರವಾರ ದಸರಾ ಗಜಪಯಣ ಸಮಾರಂಭದಲ್ಲಿ ಮಾತನಾಡಿದರು.
ಸ್ವಾತಂತ್ರೃ ಬಂದ ಮೇಲೆ 75 ವರ್ಷಗಳನ್ನು ಕಳೆದಿದ್ದೇವೆ. ಆನೆ ಮೇಲೆ 800 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಇರಿಸಿ ಮೆರವಣಿಗೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದೆ. ದಸರಾ ಕಾರ್ಯಕ್ರಮಗಳ ಮೂಲಕ ಇಡೀ ದೇಶದ ಎಲ್ಲ ಜನರೂ ಒಂದೇ ಎಂಬ ಸಂದೇಶವನ್ನು ಸಾರಲಾಗುತ್ತಿದೆ ಎಂದರು.

ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ವಿವಿಧ ಆಚಾರ, ವಿಚಾರ ವೈವಿಧ್ಯತೆಯಲ್ಲಿ ಏಕತೆ ಕಾಣುವ ಭಾರತ ದೇಶದ ಸಂಸ್ಕೃತಿಯ ಪ್ರತೀಕವೇ ನಮ್ಮ ದಸರೆ. ರಾಜರ ಕಾಲ ಕೊನೆಗೊಂಡ ಬಳಿಕ ಸರ್ಕಾರವೇ ಈ ಸಾಂಪ್ರದಾಯಿಕ ಆಚರಣೆಯನ್ನು ಮುನ್ನಡೆಸುತ್ತ ಬರುತ್ತಿದೆ ಎಂದರು.
ಪ್ರಜಾಪ್ರಭುತ್ವ ಜಾರಿಯಾದ ಬಳಿಕ ಜನರು ಮತ್ತು ಜನನಾಯಕರ ನಡುವೆ ನಂಬಿಕೆ, ಭರವಸೆ, ಜನಪರವಾದ ನಿಲುವುಗಳು, ಸಂವಿಧಾನದ ಆಶಯಕ್ಕೆ ಪೂರಕವಾದ ಆಡಳಿತಾತ್ಮಕ ನಿರ್ಧಾರಗಳು, ಭಾರತದ ಅಭಿವೃದ್ಧಿ, ಸೌಹಾರ್ದತೆಯನ್ನು ಕ್ರೋಡೀಕರಿಸಿ ಉತ್ತಮ ರಾಷ್ಟ್ರವಾಗಿ ನಿರ್ಮಾಣ ಮಾಡಲು ಇದು ದೊಡ್ಡ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾವೆಲ್ಲರೂ ಕಾಡನ್ನು ರಕ್ಷಿಸಿದರೆ, ಕಾಡು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾಡಿನ ಉಳಿವು, ಮನುಷ್ಯನ ಉಳಿವು. ಕಾಡು ನಾಶವಾದರೆ ಮನುಷ್ಯ ನಾಶವಾಗುತ್ತಾನೆ. ವನ್ಯಸಂಪತ್ತು ದೇಶದ ಸಂಪತ್ತು. ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕಿತ್ತು. ಆದರೆ, ನಮ್ಮಲ್ಲಿ ಶೇ.21ರಷ್ಟು ಮಾತ್ರ ಅರಣ್ಯವಿದೆ. ಪ್ರಕೃತಿಯ ಸಂಪತ್ತಿನ ಸಮತೋಲನ ಕಾಪಾಡಲು ಕಾಡಿನ ರಕ್ಷಣೆ, ಅಭಿವೃದ್ಧಿ, ವಿಸ್ತರಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದಸರಾ ಉತ್ಸವದಲ್ಲಿ ದೇಶವನ್ನು ಸಮೃದ್ಧ ನಾಡನ್ನಾಗಿ ಕಟ್ಟುವ ಶಪಥ ಮಾಡೋಣ ಎಂದು ಕರೆ ನೀಡಿದರು.

ದಸರಾ ಆನೆಗಳ ಪಟ್ಟಿ ಮತ್ತು ಕಿರು ಪುಸ್ತಕವನ್ನು ಬಿಡುಗಡೆಗೊಳಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಪ್ರಕೃತಿ ಮತ್ತು ಪರಿಸರವನ್ನು ಉಳಿಸಬೇಕು. ಇಲ್ಲದಿದ್ದರೆ ತಾಪಮಾನ ಹೆಚ್ಚಳವಾಗಿ ಹವಮಾನ ವೈಪರೀತ್ಯ ಉಂಟಾಗುತ್ತದೆ. ಓಜೋನ್ ಪದರ ತೆಳುವಾಗುತ್ತಿದೆ. ಕರೊನಾ ಸಂದರ್ಭದಲ್ಲಿ ಆಮ್ಲಜನಕ ಸಿಗದೆ ಹಲವಾರು ಜನರು ಸತ್ತಿದ್ದಾರೆ. ಹಾಗಾಗಿ, ಹೆಚ್ಚು-ಹೆಚ್ಚು ಮರ-ಗಿಡಗಳನ್ನು ಬೆಳೆಸಿದರೆ ಪರಿಸರ ಉಳಿಯುವ ಜತೆಗೆ, ಆಮ್ಲಜನಕವೂ ಸಿಗುತ್ತದೆ ಎಂದರು.

ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪ್ರಾಣಿ ಮತ್ತು ಮಾನವ ಸಂಘರ್ಷ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮೇಯರ್ ಶಿವಕುಮಾರ್ ಮಾತನಾಡಿ, ಮೈಸೂರು ಅರಸರು ದಸರಾ ಆಚರಣೆಯನ್ನು ಜಾರಿಗೆ ತಂದರು. 100 ವರ್ಷಗಳ ಹಿಂದೆಯೇ ಮೈಸೂರು ನಗರ ವಿದ್ಯುತ್ ವ್ಯವಸ್ಥೆ ಪಡೆಯಿತು. ರಾಜರು ಮೈಸೂರನ್ನು ಉತ್ತಮ ನಗರವಾಗಿ ನಿರ್ಮಾಣ ಮಾಡಿದರು. ಉತ್ತಮ ರಸ್ತೆ ಮಾಡಿದರು. ಮೈಸೂರು ಬೆಳವಣಿಗೆಗೆ ಮೈಸೂರು ರಾಜರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಗಜಪಯಣ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯ ದಸರಾವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ದಸರಾ ಆಚರಣೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ. ಇದನ್ನು ನೋಡಲು ವಿಶ್ವದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ ಎಂದರು.

ಹುಣಸೂರು ತಾಲೂಕು ಕಾಡಿನ ಗಡಿಯನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿ ಪ್ರಾಣಿ ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವಂತೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದಾಗ 5 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು


ಗಜಪಯಣ ಚಾಲನೆ ಕಾರ್ಯಕ್ರಮಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು. ಆದಿವಾಸಿ ಮಕ್ಕಳ ಸಾಂಪ್ರದಾಯಿಕ ನೃತ್ಯ ವಿಶಿಷ್ಟ ಮೆರುಗು ನೀಡಿತು. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತಗಳು ಎಲ್ಲರನ್ನೂ ಆಕರ್ಷಿಸಿದವು. ಪೂಜಾಕುಣಿತ, ಪಟಕುಣಿತ, ಗೊರವರ ಕುಣಿತ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾ ತಂಡಗಳ ನೃತ್ಯಪ್ರದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net