

ಚಿಕ್ಕಬಳ್ಳಾಪುರ: ಹೂವು, ಹಣ್ಣು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜಿಲ್ಲಾದ್ಯಂತ ದಸರಾ ಹಬ್ಬ ಸಡಗರ ಮನೆ ಮಾಡಿದೆ.
ಈ ಬಾರಿ ನಿರೀಕ್ಷಿತ ಮಳೆಯಾಗದಿದ್ದರೂ ಹಬ್ಬದ ಸಡಗರಕ್ಕೇನೋ ಕೊರತೆಯಿಲ್ಲ ಎಂಬುದನ್ನು ಮಾರುಕಟ್ಟೆಗಳಲ್ಲಿ ಗಿಜಿಗುಡುತ್ತಿರುವ ಜನಸಂದಣಿ ತೋರಿಸುತ್ತಿತ್ತು.
ಆಯುಧ ಪೂಜೆ ಅಂಗವಾಗಿ ಗುರುವಾರದಿಂದಲೇ ಸ್ಥಳೀಯ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಖರೀದಿ ಭರಾಟೆ ಜೋರಾಗಿ ನಡೆಯುತ್ತಿತ್ತು.
ಪೂಜೆಗೆ ಅಂಗಡಿ ಮಳಿಗೆ ಸಿದ್ಧಗೊಳಿಸುವುದು ಹಾಗೂ ವಾಹನಗಳನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿತ್ತು.
ಆಯುಧ ಪೂಜೆ ದಿನ ಪ್ರಾಣಿ ಬಲಿ ನೀಡುವುದು ಸಾಮಾನ್ಯವಾಗಿರುವುದರಿಂದ ಕುರಿ, ಮೇಕೆ, ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ವ್ಯಾಪಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕುರಿಗಳನ್ನು ಖರೀದಿಸಿ ಶುಕ್ರವಾರ ಮಾರುಕಟ್ಟೆಗೆ ಬೇಡಿಕೆಗೆ ಅನುಗುಣವಾಗಿ ಒದಗಿಸಲು ಸಿದ್ಧರಾಗಿದ್ದಾರೆ.
*ಹೂವುಗಳ ಬೆಲೆ ದುಬಾರಿ*
ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕೆ.ಜಿ.ಗುಲಾಬಿಯು ತಲಾ 350 ರೂಗಳಂತೆ ಮಾರಾಟವಾಗಿದೆ. ಇದು ಕಳೆದ ನಾಲ್ಕೈದು ವರ್ಷಗಳಲ್ಲಿ ಸಿಕ್ಕ ಸರಾಸರಿ ದಾಖಲೆಯ ಬೆಲೆ ಎಂದು ಹೂವಿನ ವ್ಯಾಲಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿದ್ದರೂ ನಿರೀಕ್ಷೆ ಗೆ ಅನುಗುಣವಾಗಿ ಮಾರುಕಟ್ಟೆಗೆ ಹೂವು ಪೂರೈಕೆಯಾಗುತ್ತಿಲ್ಲ. ಕೊರತೆ ಕಂಡ ಬಂದಿದೆ. ಇದು ಬೆಲೆಯು ಏರುಗತಿಯಲ್ಲಿ ಸಾಗಲು ಪ್ರಮುಖ ಕಾರಣ ಎನ್ನಲಾಗಿದೆ.