ಕಲಾಪ್ರಕಾರಗಳು ವೈಭವೀಕರಿಸಲು ದಸರಾ ಸಹಕಾರಿ: ಸಚಿವ ಶಿವರಾಜ್ ಎಸ್. ತಂಗಡಗಿ

4f71cb6d-4527-4dfa-a081-7e941aba2203
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸುವರ್ಣಗಳಿಗೆಯಲ್ಲಿ ನವರಾತ್ರಿ ಜನಪದ ರಂಗೋತ್ಸವವು ಯಶಸ್ವಿಯಾಗಲಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಶುಭ ಕೋರಿದರು.
ದಸರಾ ಅಂಗವಾಗಿ ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವರಾತ್ರಿ ಜಾನಪದ ರಂಗ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುದೀರ್ಘ 35 ವರ್ಷಗಳ ಇತಿಹಾಸ ಇರುವ ರಂಗಾಯಣ ಅಳಿವಿನಂಚಿನ ಜನಪದ ಕಲಾಪ್ರಕಾರಗಳಿಗೆ ದಸರೆಯಲ್ಲಿ ಮರಳಿ ವೈಭವೀಕರಿಸುವಂತೆ ಮಾಡುವುದಕ್ಕೆ ಸಾಕ್ಷಿಯಾಗಲಿದೆ. ಜನಪದ ಕಲೆಗಳಿಂದ ಎಲ್ಲ ಕಲೆಗಳು ಹುಟ್ಟಿದ್ದು, ರಂಗಾಯಣವು ಇನ್ನೂ ಎತ್ತರದ ಮಟ್ಟಕ್ಕೆ ಬೆಳೆದು ಹೊಸ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಡಲಿದೆ ಎಂದು ಹೇಳಿದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಕರ್ನಾಟಕದ ಸುವರ್ಣ ಸಂಭ್ರಮದ 50 ವರ್ಷದ ಕಾಲಘಟ್ಟದಲ್ಲಿ ಈ ವರ್ಷದ ನವರಾತ್ರಿ ಉತ್ಸವವನ್ನು 9 ದಿನಗಳ ಕಾಲ ಜನಪದ ರಂಗ ಉತ್ಸವವಾಗಿ ರೂಪಿಸಲಾಗಿದೆ. ರಂಗಯಾಣವು ಪ್ರತೀ ವರ್ಷ ಎಲ್ಲ ನಾಟಕಗಳನ್ನು ಸೇರಿದಂತೆ ಆಧುನಿಕ ನಾಟಕಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಈ ಬಾರಿ ವಿಶೇಷವಾಗಿ ಕರ್ನಾಟಕದ ಎಲ್ಲ ಭಾಗಗಳಿಲ್ಲಿ ಅಳಿವಿನಂಚಿನಲ್ಲಿರುವ ಜನಪದ ಕಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಂಗ ಉತ್ಸವದಲ್ಲಿ ಈ ಬಾರಿಯ ವಿಶೇಷ ಕಾರ್ಯಕ್ರಮಗಳಾಗಿ ದೊಡ್ಡಾಟ, ಶ್ರೀಕೃಷ್ಣಪಾರಿಜಾತ, ಸಂಗ್ಯಾಬಾಳ್ಯದಂತಹ ಸಣ್ಣಾಟ, ಮೂಡಲಪಾಯ ಯಕ್ಷಗಾನ ಪ್ರದರ್ಶನ, ತೊಗಲು ಬೊಂಬೆಯಾಟ, ನೀಲಗಾರರ ಮೇಳ (ಮಂಟೇಸ್ವಾಮಿ ಕುರಿತು ಗೀತೆಗಳ ಪ್ರಸ್ತುತಿ ಕಾರ್ಯಕ್ರಮ), ಕರಾವಳಿ ಯಕ್ಷಗಾನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು 9 ದಿನಗಳವರೆಗೆ ನಡೆಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗಭೂಮಿಯ ಸಾಧಕ ಮೈಸೂರು ಗುರುರಾಜ್ ಅವರಿಗೆ ‘ರಂಗ ಗೌರವ ಪುರಸ್ಕಾರ’ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಕೆ. ಧರಣಿದೇವಿ ಮಾಲಗತ್ತಿ, ಜನಪದ ವಿದ್ವಾಂಸ ಪಿ.ಕೆ. ರಾಜಶೇಖರ್, ರಂಗ ಸಮಾಜದ ಸದಸ್ಯರಾದ ರಾಜಪ್ಪ ದಳವಾಯಿ , ಸುರೇಶ್ ಬಾಬು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ ಡಿ ಸುದರ್ಶನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net