

ಹುಕ್ಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶನಿವಾರ ಮತ್ತು ಭಾನುವಾರ ಏರ್ಪಡಿಸಿದ್ದ 2023-24ನೇ ಸಾಲಿನ ಹುಕ್ಕೇರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಕೇವಲ ಕಾಟಾಚಾರಕ್ಕೆ ಎಂಬಂತೆ ನಡೆಯಿತು.
ಪಟ್ಟಣ ಹೊರವಲಯದ ಕ್ಯಾರಗುಡ್ಡ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಬೇಕಿದ್ದ ಕ್ರೀಡಾಕೂಟ ಸ್ಪರ್ಧಾಳುಗಳ ಕೊರತೆಯಿಂದ ಒಂದೇ ದಿನಕ್ಕೆ ಮೊಟಕುಗೊಂಡಿತು. ಭಾಗವಹಿಸಿದ್ದ ಬೆರಳೆಣಿಕೆ ಸ್ಪರ್ಧಾಳುಗಳು ಸೌಲಭ್ಯವಿಲ್ಲದೆ ಪರದಾಡುವಂತಾಯಿತು. ಪಟ್ಟಣದ ಹೊರವಲಯದಲ್ಲಿ ಕ್ರೀಡಾಕೂಟ ಆಯೋಜಿಸಿದ್ದರಿಂದ ವಾಹನಗಳ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸಿದರು.
ಏಕಾಏಕಿ ಕ್ರೀಡಾಕೂಟ ಏರ್ಪಡಿಸಿದ್ದರಿಂದ ಪ್ರಚಾರವೂ ಸಿಗಲಿಲ್ಲ. ತಾಲೂಕಿನ 52 ಗ್ರಾಪಂಗಳಿಗೂ ಮಾಹಿತಿ ನೀಡಿಲ್ಲ ಎಂಬ ದೂರುಗಳು ಕೇಳಿ ಬಂದವು. ಎರಡನೇ ದಿನ ಭಾನುವಾರ ಕ್ರೀಡಾ ಚಟುವಟಿಕೆಗಳಿಲ್ಲದೆ ಕ್ರೀಡಾಂಗಣ ಬಿಕೋ ಎನ್ನುತ್ತಿತ್ತು. ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಮನ್ವಯ ಕೊರತೆಯಿಂದ ದೈಹಿಕ ಶಿಕ್ಷಕರೂ ತೊಂದರೆ ಅನುಭವಿಸಿದರು. ಇನ್ನು ಆಹ್ವಾನ ಪತ್ರಿಕೆಯಲ್ಲಿ ಸಾಕಷ್ಟು ತಪ್ಪುಗಳ ಜತೆಗೆ ಶಿಷ್ಟಾಚಾರ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದ್ದು, ತಾಪಂಗೂ ಕ್ರೀಡಾಕೂಟದ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಇಒ ಸೇರಿ ಯಾವೊಬ್ಬ ಅಕಾರಿಯೂ ಕ್ರೀಡಾಂಗಣದತ್ತ ಸುಳಿಯಲಿಲ್ಲ. ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕಾಗಿ ಕ್ರೀಡಾ ಇಲಾಖೆ 1 ಲಕ್ಷ ರೂ. ಅನುದಾನ ನೀಡುತ್ತಿದೆ. ಹಣದ ಸದ್ಬಳಕೆಯೂ ಆಗಲಿಲ್ಲ. ಸ್ಪರ್ಧಾಳುಗಳಿಗೆ ಪ್ರಯಾಣ ಮತ್ತು ಊಟದ ಭತ್ಯೆ ನೀಡಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಯಿತು.
ಆಯೋಜಕರು, ಕ್ರೀಡಾ ಇಲಾಖೆ ಮೇಲಕಾರಿಗಳು ಸರ್ಕಾರಿ ದುಡ್ಡು ಕೊಳ್ಳೆ ಹೊಡೆದಿದ್ದಾರೆ ಎಂದು ಸ್ಪರ್ಧಾಳುಗಳು ಆರೋಪಿಸಿದರು.
ಗುಂಪು ಸ್ಪರ್ಧೆಗಳಾದ ಫುಟ್‌ಬಾಲ್, ವಾಲಿಬಾಲ್, ಖೋಖೋ, ಕಬಡ್ಡಿ, ಥ್ರೋಬಾಲ್ ಹಾಗೂ ವೈಯಕ್ತಿಕ ಸ್ಪರ್ಧೆಗಳಾದ ಅಥ್ಲೆಟಿಕ್ಸ್, ಶಾಟ್‌ಫುಟ್, ಡಿಸ್ಕಸ್, ಥ್ರೋಬಾಲ್, ಜಾವಲಿನ್ ಥ್ರೋ, ಟ್ರಿಪಲ್ ಜಂಪ್ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ ಚಾಲನೆ ನೀಡಿದರು. ಮಾಜಿ ಉಪಾಧ್ಯಕ್ಷ ಆನಂದ ಗಂಧ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಂ.ಶೆಟ್ಟಿಮನಿ, ಜುಡೋ ತರಬೇತುದಾರ ಖುತುಜಾ ಮುಲ್ತಾನಿ, ರೋಹಿಣಿ ಪಾಟೀಲ ಇತರರಿದ್ದರು.