

ಹೊನ್ನಾಳಿ: ತಾಲೂಕಿನ 2023-24ನೇ ಸಾಲಿನ ದಸರಾ ಕ್ರೀಡಾಕೂಟವು ಸೆ.15ರಂದು ಹೊನ್ನಾಳಿ ಕ್ರೀಡಾಂಗಣದಲ್ಲಿ ಮತ್ತು ಸೆ. 16ರಂದು ನ್ಯಾಮತಿಯಲ್ಲಿ ನಡೆಯಲಿದೆ ಎಂದು ತಾಲೂಕು ಸಹಾಯಕ ಕ್ರೀಡಾಧಿಕಾರಿ ಆರ್.ಎಸ್. ಕಾಳಿಂಗಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 15ರಂದು ಹೊನ್ನಾಳಿ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಶಾಸಕ ಡಿ.ಜಿ. ಶಾಂತನಗೌಡ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಅದೇ ರೀತಿ ಸೆ. 16ರಂದು ನ್ಯಾಮತಿಯಲ್ಲಿ ಶಾಸಕರು ಉದ್ಘಾಟಿಸಲಿದ್ದಾರೆ ಎಂದರು.
ಪುರುಷ ಮತ್ತು ಮಹಿಳೆಯರಿಗಾಗಿ ಅಥ್ಲೆಟಿಕ್ಸ್, ವಾಲಿಬಾಲ್, ಥ್ರೋಬಾಲ್, ಯೋಗ, ಖೋಖೋ, ಕಬ್ಬಡಿ ಮತ್ತು ಪುಟ್ಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಹೊನ್ನಾಳಿ ತಾಲೂಕು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಟಾಪಟುಗಳು ಸೆ. 15ರಂದು ಬೆಳಗ್ಗೆ 9 ಗಂಟೆಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು, ಅದೇ ರೀತಿ ನ್ಯಾಮತಿ ತಾಲೂಕಿನಲ್ಲಿ ಸೆ. 16ರಂದು ಬೆಳಗ್ಗೆ 9 ಗಂಟೆಗೆ ಅಲ್ಲಿನ ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರನ್ನು ಮಾತ್ರ ಜಿಲ್ಲಾಮಟ್ಟಕ್ಕೆ ಕಳಿಸಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕ್ರೀಡಾಧಿಕಾರಿಗಳು, ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಪರ್ಕಿಸಿ ಎಂದರು.