

ಮೈಸೂರು: ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಗಜಪಯಣ ಕಾರ್ಯಕ್ರಮವನ್ನು ಆ.21ರಂದು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪ್ರಧಾನ ಆಕರ್ಷಣೆಯಾದ ಆನೆಗಳನ್ನು ಸಾಂಪ್ರದಾಯಿಕವಾಗಿ ಕಾಡಿನಿಂದ ನಾಡಿಗೆ ಕರೆತರಲಾಗುತ್ತದೆ. ಅದಕ್ಕಾಗಿ ಆ.21ರಂದು ಗಜಪಯಣ ಆಯೋಜಿಸಲಾಗಿದೆ ಎಂದರು.
ಗಜಪಯಣದ ದಿನ 9 ಆನೆಗಳು ಬರಲಿವೆ. 2ನೇ ಹಂತದಲ್ಲಿ 5 ಆನೆಗಳು ಬರಲಿದ್ದು, 4 ಆನೆಗಳನ್ನು ತುರ್ತು ಮೀಸಲಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.
12ರಂದು ಉನ್ನತ ಮಟ್ಟದ ಸಭೆ
ವಿಶ್ವ ಆನೆ ದಿನದ ಅಂಗವಾಗಿ ಆ.12ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾನವ ಆನೆ ಸಂಘರ್ಷ ನಿರ್ವಹಣೆ ಕುರಿತಂತೆ ಅಂತಾರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿದ್ದು, ಅಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆನೆಗಳ ಕುರಿತಂತೆ ಚರ್ಚಿಸಲಾಗುವುದು. ಗಜಪಯಣದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.