

ಮೈಸೂರು: ದಸರಾ ಗಜಪಡೆಯಲ್ಲಿ ಅಂಬಾರಿ ಆನೆ ಅಭಿಮನ್ಯು, ಧನಂಜಯ ಬಳಿಕ 3ನೇ ಬಲಾಢ್ಯ ಆನೆಯಾಗಿ ಸುಗ್ರೀವ ಹೊರಹೊಮ್ಮಿದ್ದಾನೆ. ಗಜಪಡೆಯ 2ನೇ ತಂಡದ 5 ಆನೆಗಳಿಗೆ ಶುಕ್ರವಾರ ತೂಕ ಮಾಡಿಸಲಾಯಿತು. ಇದರೊಂದಿಗೆ ಎಲ್ಲ ಆನೆಗಳ ತೂಕ ಪರೀಕ್ಷೆ ಪೂರ್ಣಗೊಂಡಂತಾಗಿದೆ.
ದಸರಾ ಮಹೋತ್ಸವ ಗಜಪಡೆ ಸೇರಲು ಗುರುವಾರವಷ್ಟೇ 2ನೇ ತಂಡದಲ್ಲಿ 5 ಆನೆಗಳು ಆಗಮಿಸಿ, ಮೈಸೂರು ಅರಮನೆಯಲ್ಲಿ ಠಿಕಾಣಿ ಹೂಡಿವೆ. ಅರಮನೆ ಪ್ರವೇಶಿಸಿದ ಮರುದಿನವೇ ಆನೆಗಳ ತೂಕ ಪರೀಕ್ಷೆ ನಡೆಸುವ ಪದ್ಧತಿ ಇದೆ. ಹಾಗಾಗಿ ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ಆ್ಯಂಡ್ ಕೋ ಎಲೆಕ್ಟ್ರಾನಿಕ್ ತೂಕದ ಕೇಂದ್ರಕ್ಕೆ ಕರೆತಂದು 5 ಆನೆಗಳಿಗೆ ತೂಕದ ಪರೀಕ್ಷೆ ನಡೆಸಲಾಯಿತು.
ಅರಮನೆಯಿಂದ ಮೊದಲ ತಂಡದ ಆನೆಗಳೊಂದಿಗೆ ಸಯ್ಯಜಿರಾವ್ ರಸ್ತೆವರೆಗೂ ಬಂದ 2ನೇ ತಂಡದ ಆನೆಗಳು, ಧನ್ವಂತರಿ ರಸ್ತೆಯಲ್ಲಿ ಬೇರ್ಪಟ್ಟು ತೂಕದ ಯಂತ್ರದ ಕೇಂದ್ರಕ್ಕೆ ಸಾಗಿದವು.
5 ಆನೆಗಳಲ್ಲಿ ದುಬಾರೆ ಶಿಬಿರದ 42 ವರ್ಷದ ಸುಗ್ರೀವ 5,190 ಕೆಜಿ ತೂಗುತ್ತಿದ್ದಾನೆ. ಮತ್ತಿಗೋಡು ಶಿಬಿರ 41 ವರ್ಷದ ಮಹೇಂದ್ರ 4910 ಕೆಜಿ, ದುಬಾರೆ ಶಿಬಿರದ 51 ವರ್ಷದ ಪ್ರಶಾಂತ 4875 ಕೆಜಿ, ದೊಡ್ಡಹರವೆ ಶಿಬಿರದ 53 ವರ್ಷದ ಲಕ್ಷ್ಮೀ 3485 ಕೆಜಿ, ಬಂಡೀಪುರ ಅರಣ್ಯದ ರಾಂಪುರ ಶಿಬಿರದ 47 ವರ್ಷದ ಹಿರಣ್ಯ 2930 ಕೆಜಿ ತೂಗುತ್ತಿದೆ. 2ನೇ ತಂಡದಲ್ಲಿ ಸುಗ್ರೀವ ಬಲಾಢ್ಯ ಎನಿಸಿಕೊಂಡಿದ್ದಾರೆ. ಇಡೀ ಗಜಪಡೆ ಟೀಂನಲ್ಲಿ ತೂಕ ವಿಷಯದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.
ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಆ.21ರಂದು ಗಜಪಯಣ ನೆರವೇರಿತ್ತು. ಮೊದಲ ತಂಡದಲ್ಲಿ ಬಂದ 9 ಆನೆಗಳಿಗೆ ಆ.23ರಂದು ಅರಮನೆಗೆ ಸ್ವಾಗತ ಕೋರಲಾಗಿತ್ತು. ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ, ಲಕ್ಷ್ಮೀ, ವರಲಕ್ಷ್ಮೀ ಮತ್ತು ಏಕಲವ್ಯ ಆನೆಗಳಿಗೆ ಆ.24ರಂದು ತೂಕ ಪರೀಕ್ಷೆ ಮಾಡಲಾಗಿತ್ತು.
ಇದರಲ್ಲಿ ಅಭಿಮನ್ಯು 5,560 ಕೆ.ಜಿ., ಧನಂಜಯ 5,155 ಕೆ.ಜಿ., ಗೋಪಿ 4,970 ಕೆ.ಜಿ., ಹೊಸ ಆನೆ ಏಕಲವ್ಯ 4,730 ಕೆ.ಜಿ., ಭೀಮ 4,945 ಕೆ.ಜಿ., ಹೆಣ್ಣಾನೆಗಳಾದ ವರಲಕ್ಷ್ಮೀ 3,495 ಕೆ.ಜಿ., ಲಕ್ಷ್ಮೀ 2,480 ಕೆ.ಜಿ. ತೂಕ ಹೊಂದಿವೆ. ದೇಹ ತೂಕದಲ್ಲಿ ಇಡೀ ಗಜಪಡೆಯಲ್ಲಿ ಅಭಿಮನ್ಯು ಮತ್ತು ಧನಂಜಯ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದಿವೆ.
ಮೊದಲ ತಂಡದಲ್ಲಿ ಬಂದಿರುವ ಲಕ್ಷ್ಮೀ ಗಜಪಡೆಯಲ್ಲೇ ಕಡಿಮೆ ತೂಕ ಹೊಂದಿರುವ ಆನೆಯಾಗಿದೆ. ರಾಂಪುರದಿಂದ ಬಂದಿರುವ ಹಿರಣ್ಯ ಆನೆ 2,930 ಕೆಜಿ ತೂಕ ಹೊಂದುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದೆ.
ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ಸಂತೋಷ್ ಹೂಗಾರ್, ಪಶುವೈದ್ಯ ಡಾ.ಮುಜೀಬ್ ಇತರರು ಆನೆ ತೂಕದ ಪರೀಕ್ಷೆ ವೀಕ್ಷಿಸಿದರು. ಬಳಿಕ ಜೆ.ಕೆ.ಮೈದಾನ, ಚೆಲುವಾಂಬ ಆಸ್ಪತ್ರೆ ಬಳಿಯಿಂದ ಇರ‌್ವಿನ್ ರಸ್ತೆ ಮೂಲಕ ಆಯುರ್ವೇದ ಆಸ್ಪತ್ರೆ ವೃತ್ತಕ್ಕೆ ಬಂದು ಮೊದಲ ತಂಡದ ಗಜಪಡೆಯೊಂದಿಗೆ ಅರಮನೆಗೆ ವಾಪಸ್ ಕರೆತರಲಾಯಿತು.
ಎರಡನೇ ತಂಡದಲ್ಲಿ ಆಗಮಿಸಿದ 5 ಆನೆಗಳಿಗೂ ತೂಕ ಮಾಡಿಸಲಾಗಿದೆ. ಎಲ್ಲ ಆನೆಗಳು ಆರೋಗ್ಯವಾಗಿದ್ದು, ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿವೆ. ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.ಡಾ.ಐ.ಬಿ.ಪ್ರಭುಗೌಡ ಡಿಸಿಎಫ್(ವನ್ಯಜೀವಿ ವಿಭಾಗ)
ಮೊದಲ ತಂಡದ ಆನೆಗಳು
ಅಭಿಮನ್ಯು 5,560
ವರಲಕ್ಷ್ಮೀ 3,495
ಭೀಮ 4,945
ಏಕಲವ್ಯ 4,730
ಲಕ್ಷ್ಮೀ 2,480
ರೋಹಿತ್ 3,625
ಗೋಪಿ 4,970
ಕಂಜನ್ 4,515
ಧನಂಜಯ 5,155
2ನೇ ತಂಡದ ಆನೆಗಳು
ಸುಗ್ರೀವ 5,190
ಮಹೇಂದ್ರ 4910
ಪ್ರಶಾಂತ 4875
ದೊಡ್ಡಹರವೆ ಲಕ್ಷ್ಮೀ 3485
ಹಿರಣ್ಯ 2930