

ಮೈಸೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ದಸರಾ ಗಜಪಡೆಗಳು ಸಾಥ್ ನೀಡಿದ್ದು, ವಿಶೇಷವಾಗಿತ್ತು. ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಕಾಡಿನಿಂದ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ 13 ಆನೆಗಳು ಬೆಳಗ್ಗೆ ಬನ್ನಿಮಂಟಪದವರೆವಿಗೂ ತೆರಳಿ ತಾಲೀಮು ಮುಗಿಸಿ ಬರುವಾಗ ಸಾಲಾಗಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮಕ್ಕೆ ಡೊಳ್ಳು ಕುಣಿತ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರುಗು ನೀಡಿದವು.