ದಸರಾ ಹಬ್ಬ ಸರ್ಕಾರಿ ಬಸ್ ಫುಲ್ ರಷ್

MUDAGOD BUS
Published on

ಮುಂಡಗೋಡ: ದಸರಾ ಹಬ್ಬದ ನಿಮಿತ್ತ ಬೇರೆಡೆಯಿಂದ ಸ್ವಗ್ರಾಮಕ್ಕೆ ತೆರಳುವವರು ಹಾಗೂ ರಜೆ ಮೇಲೆ ತೆರಳಿ ವಾಪಸ್ ಕಾರ್ಯ ಸ್ಥಾನಕ್ಕೆ ಬರುವವರ ಸಂಖ್ಯೆ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಹೆಚ್ಚಿದ್ದರಿಂದ ಪಟ್ಟಣದ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿಕೊಂಡಿದ್ದ ದೃಶ್ಯ ಕಂಡುಬಂದಿತು.

ಹಬ್ಬ-ಹರಿದಿನಗಳು ಮುಗಿದ ನಂತರ ಬಸ್​ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿಢೀರ್ ಏರಿಕೆಯಾಗುತ್ತದೆ. ಆದರೆ, ಈ ವಾರ ಜರುಗಿದ ದಸರಾ ಹಬ್ಬಕ್ಕೆ ಭಾನುವಾರ ಸೇರಿ ಸತತವಾಗಿ ಮೂರು ದಿನ ಸರ್ಕಾರಿ ರಜೆ ಸಿಕ್ಕಿದ್ದರಿಮದ ದೂರದ ಊರುಗಳಲ್ಲಿ ಕಾರ್ಯನಿರ್ವಹಿಸುವವರು ಸ್ವ ಗ್ರಾಮಕ್ಕೆ ಆಗಮಿಸಿದ್ದರು. ಹಬ್ಬದ ಮುಗಿಸಿ ಭಾನುವಾರ ಸಂಜೆಯಿಂದ ಮರಳಿ ಹೋಗುವವರ ಸಂಖ್ಯೆಯೂ ತುಸು ಹೆಚ್ಚಾಗಿತ್ತು. ಭಾನುವಾರ ಸಂಜೆಯಿಂದ ಮುಂಡಗೋಡನಿಂದ ಹುಬ್ಬಳ್ಳಿ ಹಾಗೂ ಶಿರಸಿಯತ್ತ ಸಂಚರಿಸುವ ಎಲ್ಲ ಬಸ್​ಗಳು ಪ್ರಯಾಣಿಕರಿಂದ ಫುಲ್ ರಷ್ ಆಗಿದ್ದವು. ಎರಡುನೂರಕ್ಕೂ ಹೆಚ್ಚು ಜನರು ಹುಬ್ಬಳ್ಳಿಯತ್ತ ತೆರಳಲು ಬಸ್ ನಿಲ್ದಾಣದಲ್ಲಿ ಕಾಯ್ದು ನಿಂತುಕೊಂಡರೆ ಶಿರಸಿಯಿಂದಲೆ ಜನರನ್ನು ತುಂಬಿಕೊಂಡು ಫುಲ್ ರಷ್ ಆಗಿ ಬರುವ ಬಸ್​ಗಳು ಮುಂಡಗೋಡದಲ್ಲೂ ಹತ್ತಾರು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಬಸ್ ಬಂತಲ್ಲ ಎಂದುಕೊಂಡು ಜೋತು ಬಿದ್ದು ನೇತಾಡುತ್ತ ಸಂಚರಿಸಬೇಕಾದ ಪರಿಸ್ಥಿತಿ ಪ್ರಯಾಣಿಕರದಾಗಿತ್ತು. ಬಹುತೇಕ ಪ್ರಯಾಣಿಕರು ನಾಳೆ ಹೋದರಾಯಿತು ಎಂದುಕೊಂಡು ವಾಪಸ್ ಮನೆಯತ್ತ ತೆರಳುತ್ತಿದ್ದ ದೃಶ್ಯ ಕಂಡುಬಂದಿತು. ಮತ್ತೆ ಕೆಲವರು ಬಾಡಿಗೆ ಕಾರ್​ಗಳಲ್ಲಿ ಪ್ರಯಾಣಿಸಿದರು. ಶೀಘ್ರವೇ ಮುಂಡಗೋಡದಲ್ಲಿ ಬಸ್ ಡಿಪೋ ಕಾರ್ಯಾರಂಭಿಸಬೇಕು. ಅಂದಾಗ ಮಾತ್ರ ತಾಲೂಕಿನ ಜನರು ಇಂತಹ ಸಮಸ್ಯೆಯಿಂದ ಪರದಾಡುವುದು ತಪ್ಪುತ್ತದೆ ಎಂಬುದು ಪ್ರಯಾಣಿಕರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net