ದಸರಾ ಹಬ್ಬ ವ್ಯಾಪಾರ ಜೋರು ಕುಂಬಳಕಾಯಿ- ಹೂವಿನ ಮಾರಾಟ ಗ್ರಾಹಕರ ಜೇಬಿಗೆ ಕತ್ತರಿ

raichur
raichur
Published on

ರಾಯಚೂರು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ದಸರಾ ಹಬ್ಬ ಕಳೆ ಗುಂದಿದ್ದು, ಬುಧವಾರ ನಡೆಯುವ ಆಯುಧ ಪೂಜೆಯ ನಿಮಿತ್ತ ನಗರ ಸೇರಿದಂತೆ ಜಿಲ್ಲಾಧ್ಯಂತ ಮಂಗಳವಾರ ಕುಂಬಳಕಾಯಿ, ಬೂದ ಕುಂಬಳಕಾಯಿ, ಬಾಳೆ ಕಂದು, ನಿಂಬೆಹಣ್ಣು ಹಾಗೂ ಹೂವಿನ ಮಾರಾಟ ಜೋರಾಗಿ ಕಂಡು ಬಂದಿತ್ತು.

ನಗರದ ಭಂಗಿಕುಂಟ, ತರಕಾರಿ ಮಾರುಕಟ್ಟೆ ,ಬಂಗಾರ ಬಜಾರ,ಹರಿಹರ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆ ಹಾಗೂ ವತ್ತಗಳಲ್ಲಿ ಈಗಾಗಲೇ ರೈತರು ಕುಂಬಳಕಾಯಿಗಳನ್ನು ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಆಯುಧ ಪೂಜೆಗಾಗಿ ಎಲ್ಲರೂ ಸಹಜವಾಗಿ ಮನೆ, ಅಂಗಡಿ, ಗ್ಯಾರೇಜ್, ವ್ಯಾಪಾರ ಮಳಿಗೆ, ಬಟ್ಟೆ ಅಂಗಡಿ, ಹೋಟೆಲ್ ಶುಚಿ ಮಾಡುತ್ತಾರೆ. ಇದರೊಂದಿಗೆ ತಮ್ಮ ವತ್ತಿಗೆ ಸಂಬಂಧಿಸಿದ ಪರಿಕರ ಹಾಗೂ ನಿತ್ಯ ಬಳಸುವ ವಾಹನಗಳನ್ನು ಸ್ವಚ್ಛ ಮಾಡಿ, ಅವುಗಳನ್ನು ಒಂದೆಡೆ ಇಟ್ಟು ಆಯುಧ ಪೂಜೆ ಮಾಡುತ್ತಾರೆ. ಈ ವೇಳೆ ಕುಂಬಳಕಾಯಿ ಒಡೆಯುವುದು ಸಂಪ್ರದಾಯ. ಹೀಗಾಗಿ ರೈತರು, ಮಾರಾಟಗಾರರು ಒಂದು ದಿನ ಮುಂಚೆಯೇ ಕುಂಬಳಕಾಯಿ, ಬೂದ ಕುಂಬಳಕಾಯಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.

ಬೆಲೆ ಹೆಚ್ಚಳ

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ಉತ್ತಮವಾಗಿ ಚಂಡು ಹೂ ಬೆಳೆಯಲಾಗಿದ್ದು, ದಸರಾ ಸೀಸನ್‌ನಲ್ಲಿ ಈ ಬಾರಿ ಪ್ರತಿ ಕೆ.ಜಿಗೆ 140 ರಿಂದ 150 ರೂ. ದರಕ್ಕೆ ಮಾರಾಟವಾಗುತ್ತಿದೆ. ಹಬ್ಬ-ಹರಿದಿನ, ಕಾರ್ಯಕ್ರಮ, ಸಮಾರಂಭಗಳಲ್ಲಿ ಕೆ.ಜಿಗೆ 40 ರಿಂದ 50 ರೂ. ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅಧಿಕ ಬೆಲೆ ದಾಟಿದ ಹಿನ್ನಲೆಯಲ್ಲಿ ರೈತರಿಂದ ಚಂಡು ಹೂ ಮಾರುಕಟ್ಟೆಗೆ ಬರದಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಏರಿದ ಏಲಕ್ಕಿ ಬಾಳೆ

ನವರಾತ್ರಿ ಹಿನ್ನೆಲೆಯಲ್ಲಿ ಹಬ್ಬಕ್ಕೆ ಏಲಕ್ಕಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ವೇಳೆ ಮಳೆ ಬೀಳುತ್ತಿರುವುದರಿಂದ ಬೆಳೆ ಹಾಳಾಗಿದ್ದು, ಬಾಳೆಹಣ್ಣಿನ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಕೆಜಿ.ಗೆ 72 ರೂ. ಇದೆ. ಸಗಟು ದರದಲ್ಲಿ 42 ರೂ. ಇದ್ದು, ಚಿಲ್ಲರೆ ದರದಲ್ಲಿ ಕೆ.ಜಿ. ಏಲಕ್ಕಿ ಬಾಳೆಗೆ 70-80 ರೂ. ಇದೆ. ಜತೆಗೆ ಚಿಲ್ಲರೆ ಮಾರಾಟದಲ್ಲಿ ಗಾತ್ರಕ್ಕೆ ಅನುಗುಣವಾಗಿ ಒಂದು ನಿಂಬೆಹಣ್ಣಿಗೆ 5 ರೂ.ನಂತೆ ಮಾರುತ್ತಿದ್ದಾರೆ. ತೀರಾ ಚೌಕಾಸಿ ಮಾಡಿದರೆ ಚಿಕ್ಕ ಗಾತ್ರದ್ದು 10 ರೂ.ಗೆ ಮೂರು ಹಣ್ಣು ಕೊಡುತ್ತಿದ್ದಾರೆ. ಸಗಟು ದರದಲ್ಲಿ 800 ಕಾಯಿಯ ಒಂದು ಮೂಟೆಗೆ 800-1,200 ರೂ. ಇದೆ. ಇದರ ಜತೆಗೆ ಹಲವೆಡೆ ಬುಧವಾರ ಹಾಗೂ ಗುರುವಾರ ರಜೆ ಇರುವುದರಿಂದ ಹಲವು ಕಚೇರಿ, ಸಂಸ್ಥೆಗಳು, ವಾಹನಗಳಿಗೆ ಮಂಗಳವಾರವೇ ಪೂಜೆ ನೆರವೇರಿಸಿ ಸಿಬ್ಬಂದಿಗೆ ಸಿಹಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net