

ವಿಜಯಪುರ: ಕನ್ನಡದ ಪ್ರತಿಷ್ಠಿತ ನಂ. 1 ದಿನಪತ್ರಿಕೆಯಾದ ವಿಜಯವಾಣಿಯಿಂದ ದಸರಾ ಹಾಗೂ ದೀಪಾವಳಿ ಪ್ರಯುಕ್ತ ‘ಅದೃಷ್ಠ ನಿಮ್ಮದು ಕೊಡುಗೆ ನಮ್ಮದು’ ಘೋಷವಾಕ್ಯದಡಿ ಪ್ರತಿ ವರ್ಷ ಹಮ್ಮಿಕೊಂಡು ಬರಲಾಗುತ್ತಿರುವ ವಿಜಯೋತ್ಸವ ಕಾರ್ಯಕ್ರಮದ ಲಕ್ಕಿ ಡೀಪ್ ಕಾರ್ಯಕ್ರಮ ಸೋಮವಾರ ವಿದ್ಯುಕ್ತವಾಗಿ ನೆರವೇರಿತು.
ನಗರದ ಮನಗೂಳಿ ರಸ್ತೆಯಲ್ಲಿರುವ ವಿಆರ್‌ಎಲ್ ಮತ್ತು ವಿಜಯವಾಣಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಲಕ್ಕಿ ಡೀಪ್ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಉದ್ದಿಮೆದಾರರು ಹಾಗೂ ನೂರಾರು ಗ್ರಾಹಕರು ಪಾಲ್ಗೊಂಡಿದ್ದರು.
ಚೀಟಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಡಿನ ಪ್ರತಿಷ್ಠಿತ ಆರ್‌ಕೆಎಂ ಆಯುರ್ವೇದ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಶಂಭು ಕರ್ಪೂರಮಠ ಮಾತನಾಡಿ, ವಿಜಯವಾಣಿಗೆ ಇನ್ನೊಂದು ಹೆಸರೇ ವಿಶ್ವಾಸಾರ್ಹತೆ. ನಿಖರ ಹಾಗೂ ನೈಜ ವರದಿ ಮೂಲಕವೇ ವಿಜಯವಾಣಿ ನಾಡಿನ ಅಸಂಖ್ಯಾತ ಓದುಗರ ಮನ ಗೆದ್ದಿದೆ. ಬೆಳಗ್ಗೆ ವಿಜಯವಾಣಿ ಓದುವುದರೊಂದಿಗೆಯೇ ಅನೇಕರ ದಿನಚರಿ ಆರಂಭಗೊಳ್ಳುತ್ತಿದೆ. ಇದೊಂದು ಜನಮನದ ಜೀವನಾಡಿ ಎಂದರು.
ತಿರುಪತಿಯ ಆಧ್ಯಾತ್ಮವಾದಿ, ಶಕ್ತಿದೇವತೆಯ ಆರಾಧಕರೂ ಆಗಿರುವ ವಾಸ್ತು ಶಾಸ್ತ್ರಜ್ಞ ಗಿರಿಧರರಾಜು ಕೆ.ಕೆ ಮಾತನಾಡಿ, ವಾಸ್ತುಶಾಸ್ತ್ರದ ಬಳಕೆಯೊಂದಿಗೆ ಉದ್ಯಮಿಗಳು ಹೇಗೆ ಪ್ರಗತಿ ಸಾಧಿಸಬಹುದೆಂದು ವೈಜ್ಞಾನಿಕವಾಗಿ ವಿವರಿಸಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಿಜಯವಾಣಿಯಿಂದ ಕಳೆದ ಹತ್ತು ವರ್ಷಗಳಿಂದ ವಿಜಯೋತ್ಸವ ಆಯೋಜಿಸಿಕೊಂಡು ಬರಲಾಗಿದ್ದು, ಇದೀಗ 11 ನೇ ವರ್ಷ ಯಶಸ್ವಿಯಾಗಿ ನೆರವೇರಿದೆ. ಈ ಯಶಸ್ವಿಗೆ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಗ್ರಾಹಕರೇ ಕಾರಣ ಎಂದರು.
ಈ ವರ್ಷ ಜಿಲ್ಲೆಯಲ್ಲಿ ಒಟ್ಟು 22 ಪಾಲುದಾರರು ಭಾಗವಹಿಸಿದ್ದು, ರಾಜ್ಯದಲ್ಲಿ 400 ಕ್ಕೂ ಹೆಚ್ಚು ಪಾಲುದಾರರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ 2500 ಕ್ಕೂ ಹೆಚ್ಚು ಬಹುಮಾನ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ 150 ಕ್ಕೂ ಹೆಚ್ಚು ಬಹುಮಾನಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 123 ಬಹುಮಾನಗಳನ್ನು ಹಂಚಲಾಗಿದ್ದು, 27 ಬಹುಮಾನಗಳಿಗಾಗಿ ಲಕ್ಕಿ ಡೀಪ್ ಮಾಡಲಾಗುತ್ತಿದೆ ಎಂದರು.
ಗ್ರಾಹಕರು ಹಾಗೂ ಉದ್ಯಮಿಗಳ ಸಮ್ಮುಖದಲ್ಲಿಯೇ ಚೀಟಿ ಎತ್ತುವ ಮೂಲಕ ಪಾರದರ್ಶಕವಾಗಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು. ಜಾಹೀರಾತು ವಿಭಾಗದ ಮುಖ್ಯಸ್ಥ ಶ್ರೀಧರ ಜಾಧವ, ಈಶ್ವರ ಹನಗಂಡಿ ಮತ್ತಿತರರಿದ್ದರು.