

ಲಿಂಗಸುಗೂರು: ಪಟ್ಟಣದಲ್ಲಿ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ದಸರಾ ಧರ್ಮ ಸಮ್ಮೇಳನ ಯಶಸ್ಸಿಗೆ ಪಕ್ಷ, ಜಾತಿ, ಮತ, ಪಂಥಗಳ ಭೇದ ಮರೆತು ಸಹಕಾರ ನೀಡಬೇಕೆಂದು ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಪೂರ್ವ ಸಿದ್ಧತಾ ಸಭೆಯಲ್ಲಿ ಶನಿವಾರ ಸಂಜೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧರ್ಮಗಳ ಕುರಿತು ಅನೇಕ ತಪ್ಪು ವ್ಯಾಖ್ಯಾನಗಳು ಕೇಳಿಬರುತ್ತಿವೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಘೋಷ್ಯವಾಕ್ಯದೊಂದಿಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿವರ್ಷ ರಾಜ್ಯದ ವಿವಿಧೆಡೆ ಶರನ್ನವರಾತ್ರಿ ವೇಳೆ ಲೋಕಕಲ್ಯಾಣಾರ್ಥ, ಮನುಕುಲದ ಒಳಿತಿಗಾಗಿ ದಸರಾ ಧರ್ಮ ಸಮ್ಮೇಳನ ಆಯೋಜಿಸುವ ಮೂಲಕ ಧರ್ಮ ಮಾರ್ಗದಿಂದ ಸಾಗುವ ಧರ್ಮ ಸಂದೇಶ ಸಾರುತ್ತ ಮುನ್ನಡೆಯುತ್ತಿದ್ದಾರೆ ಎಂದರು.
ಮಾಜಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಮರೇಗೌಡ ಬಯ್ಯಪುರ ಮಾತನಾಡಿ, ವೀರಶೈವ-ಲಿಂಗಾಯತ ಪರಂಪರೆಯ ಪಂಚಪೀಠಗಳು ಸಮಾಜವನ್ನು ಧರ್ಮ ಮಾರ್ಗದಿಂದ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.
ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿ ಜಾತಿ, ಮತ-ಪಂಥ ಎಲ್ಲವನ್ನೂ ಮೀರಿ ಮನುಷ್ಯ ಕುಲ ಒಂದೇ ಎಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತ ಬರುತ್ತಿವೆ. ರಂಭಾಪುರಿ ಜಗದ್ಗುರುಗಳು ಪ್ರತಿವರ್ಷ ದಸರಾ ಧರ್ಮ ಸಮ್ಮೇಳನ ಆಯೋಜಿಸುತ್ತ ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುತ್ತ, ಜನರು ಧರ್ಮ ಮಾರ್ಗದಿಂದ ಬದುಕು ಸಾಗಿಸಲು ಮಾರ್ಗದರ್ಶನ ನೀಡುತ್ತ ಬರುತ್ತಿದ್ದಾರೆ. ಈ ವರ್ಷ ಲಿಂಗಸುಗೂರಿನಲ್ಲಿ ನಡೆಯಲಿರುವ ಧರ್ಮ ಸಮ್ಮೇಳನ ಶುಭ ಸಂಕೇತವಾಗಿದ್ದು, ಸರ್ವ ಜಾತಿ, ಜನಾಂಗದವರು ತನು, ಮನ, ಧನದಿಂದ ಸಹಾಯ-ಸಹಕಾರ ನೀಡಬೇಕೆಂದು ಅಮರೇಗೌಡ ಬಯ್ಯಪುರ ಮನವಿ ಮಾಡಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಮಹಾಂತಿನ ಮಠದ ಗುರುಮಹಾಂತ ಶ್ರೀಗಳು, ಮಾಣಿಕೇಶ್ವರಿ ಮಠದ ಮಾತಾ ನಂದಿಕೇಶ್ವರಿ ಅಮ್ಮ, ಶಾಂಭವಿ ಮಠದ ಸೋಮಶೇಖರಯ್ಯ ಶ್ರೀಗಳು, ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ ಇತರರು ಇದ್ದರು.