ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ‘ಅಭಿಮನ್ಯು’ ಟೀಂ

14
Published on

ಆರ್.ಕೃಷ್ಣ ಮೈಸೂರು

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸಾಗಿದ ‘ಅಭಿಮನ್ಯು’ ನೇತೃತ್ವದ ಗಜಪಡೆ ಶುಕ್ರವಾರ ರಿಲ್ಯಾಕ್ಸ್ ಮೂಡ್‌ನಲ್ಲಿ ಇತ್ತು.

ಲಕ್ಷಾಂತರ ಜನರ ಮಧ್ಯೆ ಯಾವುದೇ ಅಳುಕಿಲ್ಲದೆ ಯಶಸ್ವಿಯಾಗಿ ಬನ್ನಿಮಂಟಪದವರೆಗೆ ಸಾಗಿದ ಗಜಪಡೆ ಎಲ್ಲರಿಂದ ಸೈ ಎನಿಸಿಕೊಂಡಿತು. ಇದರಿಂದ ಅರಣ್ಯಾಧಿಕಾರಿಗಳು, ಮಾವುತರು, ಕಾವಾಡಿಗಳು ಸಂತಸಗೊಂಡಿದ್ದರು.

ಮುಂಜಾನೆಯೇ ಎಲ್ಲ ಆನೆಗಳಿಗೂ ಬಿಸಿನೀರ ಮಜ್ಜನ ಮಾಡಿಸಿ, ಅವಲಕ್ಕಿ, ಬೆಲ್ಲ, ಕಾಯಿ, ಗ್ಲೂಕೋಸ್ ಮಿಶ್ರಿತ ಆಹಾರ ನೀಡಿದ್ದಲ್ಲದೆ ಹಸಿ ಹುಲ್ಲು, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯವನ್ನು ವಿಶೇಷವಾಗಿ ನೀಡಲಾಯಿತು.

ಮಾವುತರು, ಕಾವಾಡಿಗಳು ಆನೆಗಳ ಆರೈಕೆ, ದಸರಾ ಅನುಭವ ಹಂಚಿಕೊಳ್ಳುತ್ತಿದ್ದರೆ, ಅವರ ಕುಟುಂಬದವರು ಮರಳಿ ಕಾಡಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಇದ್ದರು. ಮಕ್ಕಳು ಆಟೋಟದಲ್ಲಿ ತಲ್ಲೀನವಾಗಿದ್ದರು.

ಕಾಡಿನಿಂದ ನಾಡಿಗೆ ಬಂದ ಮೊದಲ ತಂಡದ ಆನೆಗಳು ಎರಡು ತಿಂಗಳಿನಿಂದ ನಗರದ ಪರಿಸರಕ್ಕೆ ಹೊಂದಿಕೊಂಡು ತಾಲೀಮಿನಿನಲ್ಲಿ ಭಾಗವಹಿಸಿದ್ದವು. ಕಳೆದೊಂದು ತಿಂಗಳಲ್ಲಿ ಮೊದಲ ತಂಡವನ್ನು ಸೇರಿಕೊಂಡ ಎರಡನೇ ತಂಡದ ಆನೆಗಳು ಸೇರಿದಂತೆ ಒಟ್ಟು 14 ಆನೆಗಳ ಪಡೆ, ನಿತ್ಯ ತಾಲೀಮಿನಲ್ಲಿ ಭಾಗವಹಿಸಿದ್ದವು.

ಅರಮನೆ ಅಂಗಳದ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಬೀಡು ಬಿಟ್ಟಿರುವ ಅಭಿಮನ್ಯು ಆರಾಮವಾಗಿ ಇದ್ದರೆ, ಗಜಪಡೆಯಲ್ಲಿ ಆಕರ್ಷಕವಾಗಿರುವ ಭೀಮನನ್ನು ನೋಡಲು ಜನರು ಮುಗಿಬಿದ್ದರು.

ಆನೆಗಳ ಮುಂದೆ ನಿಂತು ಜನರು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರೆ, ಅರಣ್ಯ ಅಧಿಕಾರಿಗಳು, ಪೊಲೀಸರು ದೂರ ಕಳುಹಿಸಲು ಸತತ ಪ್ರಯತ್ನ ಪಡುತ್ತಿದ್ದರು. ಇನ್ನು ಸ್ನಾನ ಘಟ್ಟದಲ್ಲಿ ಆನೆ ತೊಳೆಯುವಾಗ ಜನರು ಮುಗಿ ಬಿದ್ದರು.

ಮೈಸೂರು ಅರಮನೆ ಆವರಣದಲ್ಲಿ ಪ್ರವಾಸಿಗರ ದಂಡೇ ಇದ್ದುದ್ದರಿಂದ ಆನೆಗಳ ಬಳಿ ತೆರಳದಂತೆ ಶ್ರೀಭುವನೇಶ್ವರಿ ದೇವಸ್ಥಾನದ ಬಳಿಯೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ಸರ್ಪಗಾವಲು ಹಾಕಿ ತಡೆದರು. ಆದರೂ ಕೆಲವರು ಒಳನುಸುಳಿ ಬಂದು ಆನೆಗಳನ್ನು ನೋಡಲು ಮುಂದಾದರು. ಕೆಲವರು ಅಭಿಮನ್ಯು ಆನೆ ಬಳಿಗೆ ಬಂದು ಫೋಟೋ ತೆಗೆದುಕೊಳ್ಳಲು ಮುಂದಾದರು. ವಾವುತರು ಮತ್ತು ಕಾವಾಡಿಗಳು ಸಹ ಜನ ಆನೆಗಳ ಹತ್ತಿರ ಬರದಂತೆ ಎಚ್ಚರಿಕೆ ನೀಡುತ್ತಿದ್ದರು.

ಯಶಸ್ವಿಯಾಗಿ ಅಂಬಾರಿ ಹೊತ್ತ ಅಭಿಮನ್ಯುವಿನ ಮೇಲೆ ವಿಶೇಷ ಪ್ರೀತಿ ತೋರಿದ ಮಾವುತ ವಸಂತ ತುಂಬಾ ಖುಷಿಯಿಂದಲೇ ಆನೆಯ ಕೈ ತಡವಿ ಸಂತಸವ್ಯಕ್ತಪಡಿಸಿದರು. ಕಾವಾಡಿ ರಾಜು ಸಹ ಅಭಿಮನ್ಯುಗೆ ಮೈ, ಸೊಂಡಿಲು ಸವರಿ ಹಾರೈಕೆ ಮಾಡುತ್ತಿದ್ದರು.

ಇದೇ ಮೊದಲ ಬಾರಿಗೆ ಜಂಬೂಸವಾರಿಂುಲ್ಲಿ ಸಾಗಿದ ಖುಷಿಂುಲ್ಲಿದ್ದ ಶ್ರೀಕಂಠ ಆನೆ ಅದರ ವಾವುತ, ಕಾವಾಡಿಗಳು ನೀರಿನ ತೊಟ್ಟಿಂುಲ್ಲಿ ಸ್ನಾನ ಮಾಡಿದರೆ, ಪ್ರಶಾಂತ ಆನೆಗೆ ಕಾಲಿನ ಪಾದದಲ್ಲಿ ಏನೋ ಸಮಸ್ಯೆ ಆಗಿದ್ದರಿಂದ ಅರಣ್ಯಾಧಿಕಾರಿ, ಮಾವುತ-ಕಾವಾಡಿಗರು ಪರಿಶೀಲಿಸಿ ಶುಶ್ರೂಷೆ ಮಾಡಿದರು.

ಜಂಬೂಸವಾರಿಯಲ್ಲಿ ಸಾಗಿದ ಕಂಜಾನ್ ಗಂಭೀರವಾಗಿ ನಿಂತೇ ಸ್ನಾನ ವಾಡಿಸಿಕೊಳ್ಳುತ್ತಿದ್ದ. ಇದನ್ನು ನೆರೆದಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಂುುತ್ತಿದ್ದರು. ಒಂದೇ ಶೆಡ್‌ನಲ್ಲಿ ಸಾಲಾಗಿದ್ದ ಭೀಮ, ದೊಡ್ಡಹರವೆ ಲಕ್ಷ್ಮೀ, ಮಹೇಂದ್ರ, ಏಕಲವ್ಯ ಆನೆಗಳು ಹುಲ್ಲು, ಸೊಪ್ಪು ಮೇಂುುತ್ತಾ ವಿಶ್ರಾಂತಿಂುಲ್ಲಿದ್ದವು.

ಧೈರ್ಯದಿಂದ ಹೆಜ್ಜೆ ಹಾಕಿದ ಹೊಸ ಆನೆಗಳು:

ಕಾಡಿನಿಂದ ಬಂದಿದ್ದ ಆನೆಗಳಲ್ಲಿ ಹೊಸ ಆನೆಗಳು ಜನರ, ನಗರದ ಸದ್ದುಗದ್ದಲಗಳಿಗೆ ಅಂಜದೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಧೈರ್ಯ ಪ್ರದರ್ಶಿಸಿದವು. ಮೊದಲ ಬಾರಿಗೆ ಜಂಬೂಸವಾರಿಂುಲ್ಲಿ ಸಾಗುವ ಮೂಲಕ ಶ್ರೀಕಂಠ, ರೂಪಾ, ಹೇಮಾವತಿ ಆನೆಗಳು ವಿಶ್ವಾಸ ಮೂಡಿಸಿದವು.

ಕೆಲ ದಿನಗಳ ಹಿಂದೆ ಪಟ್ಟದಾನೆ ಶ್ರೀಕಂಠ ಅರಮನೆ ಆವರಣದಲ್ಲಿ ವಿಚಲಿತನಾಗಿದ್ದ. ಆದರೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಾವುದೇ ರೀತಿಯಲ್ಲೂ ವಿಚಲಿತನಾಗದೆ ಧೈರ್ಯದಿಂದ ಹೆಜ್ಜೆ ಹಾಕಿದ್ದ. ಇದರೊಂದಿಗೆ ಅತಿ ಚಿಕ್ಕ ವಯಸ್ಸಿನ (11 ವರ್ಷ) ಹೇಮಾವತಿ ಕೂಡ ಜನರ ಶಿಳ್ಳೆ-ಚಪ್ಪಾಳೆ, ಕೂಗಾಟಕ್ಕೆ ಅಂಜದೆ ಹೆಜ್ಜೆ ಹಾಕಿ ಭೇಷ್ ಅನಿಸಿಕೊಂಡಿದೆ.

ಗೆಜ್ಜೆ ಆಭರಣ ವಾಪಸು

ದಸರಾ ಜಂಬೂಸವಾರಿ ಮೆರವಣಿಗೆಗೆ ರಾಜಪೋಷಾಕಿನೊಂದಿಗೆ ಸಿಂಗಾರಗೊಂಡಿದ್ದ ಆನೆಗಳ ಮೇಲಿದ್ದ ವಸ್ತುಗಳು, ಗೆಜ್ಜೆ, ಆಭರಣ ಇತ್ಯಾದಿಗಳನ್ನು ಅರಮನೆ ಮಂಡಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಸ್ತಾಂತರಿಸಿದರು.

ಅರಮನೆ ಮಂಡಳಿಯಿಂದ ದಸರಾ ಸಮಯದಲ್ಲಿ ಅಲಂಕಾರಿಕ ವಸ್ತುಗಳನ್ನು ನೀಡಿ ವಾಪಸ್ ಪಡೆಯುವುದು ವಾಡಿಕೆ. ಈ ಆಭರಣ, ಸಮವಸ್ತ್ರಗಳನ್ನು ಬನ್ನಿಮಂಟಪದಿಂದ ವಾಪಸ್ ಆದಾಗ ರಾತ್ರಿಯೇ ತೆಗೆದು ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಗ್ಗೆೆ ಅವುಗಳನ್ನು ಒಂದೆಡೆ ಸೇರಿಸಿ ಅರಮನೆ ಮಂಡಳಿಗೆ ಹಿಂದಿರುಗಿಸಲಾಯಿತು.

ಗಜಪಡೆಗೆ ಇಂದು ಬೀಳ್ಕೊಡುಗೆ

ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಯೊಂದಿಗೆ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬಕ್ಕೆ ಅ.4ರಂದು ಬೀಳ್ಗೊಡಲಾಗುವುದು. ಬೆಳಗ್ಗೆ ಅರಮನೆ ಆವರಣದಲ್ಲಿ ಪೂಜೆಯೊಂದಿಗೆ ಗಜಪಡೆಗಳನ್ನು ಅರಮನೆ ಆವರಣದಿಂದ 55 ದಿನಗಳ ನಗರವಾಸದಿಂದ ಮರಳಿ ಕಾಡಿಗೆ ಕಳುಹಿಸಿಕೊಡಲಾಗುವುದು. ಲಾರಿಗಳಲ್ಲಿ ಎಲ್ಲ ಆನೆಗಳು ನಾಡಿಗೆ ವಿದಾಯ ಹೇಳಿ ಸ್ವಸ್ಥಾನಕ್ಕೆ ತೆರಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net