

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಗಂಡುಗಲಿ ಹೇಮಾವತಿ ಬಹು ಉದ್ಧಂಡ
ಚಂಡಾಮುಂಡರೆಂಬರ ಖಂಡಿಸಿಯೇ |
ಚಾಮುಂಡಿಯೆನಿಸಿಯೇ ಕೊಂಡಳಾ ದೇವಿ ||
(ಚಂಡನನ್ನು ಸಂಹರಿಸಿದ್ದರಿಂದ ದೇವಿಗೆ ‘ಚಂಡಿ’ ಎಂಬ ಹೆಸರು ಬಂತು. ಚಂಡ-ಮುಂಡರಿಬ್ಬರನ್ನು ಸಂಹರಿಸಿದ್ದರಿಂದ ‘ಚಾಮುಂಡಿ’ ಎಂದು ವಿಶ್ವದಲ್ಲಿ ಖ್ಯಾತಿಯಾದಳು ಮೈಸೂರಿನ ಚಾಮುಂಡೇಶ್ವರಿ ದೇವಿ.)
ದೇವಿಯು ವಿರಾಟ್ಶಕ್ತಿ ಸ್ವರೂಪಳು. ಅವಳಿಂದಲೇ ಈ ವಿಶ್ವ ಹೊರಹೊಮ್ಮಿದೆ. ಅವಳಿಂದಲೇ ಶಕ್ತಿ ಸಂಪನ್ನವಾಗಿದೆ. ಅಖಿಲ ಸಿರಿಸಂಪತ್ತುಗಳ, ತೇಜಸ್ಸಿನ, ಅಧಿಕಾರದ ರೂಪರಾಶಿಯ ಹಾಗೂ ಸಕಲ ಸದ್ಗುಣಗಳ ಅಧಿದೇವತೆ ದೇವಿ. ಇವಳೇ ಯಜ್ಞಸ್ವರೂಪಳು ಹಾಗೂ ಪರಾವಿದ್ಯಾ ಮತ್ತು ಅಪರಾವಿದ್ಯಾ. ಈ ದೇವಿ ಲೌಕಿಕ ಮತ್ತು ಆಧ್ಯಾತ್ಮಿಕ ಸಂಪತ್ತನ್ನು ನೀಡುವಳು. ಇವಳೇ ಕಷ್ಟಹಾರಿಣಿ ಮತ್ತು ದುಷ್ಟ ಸಂಹಾರಿಣಿ.
ಚಾಮುಂಡೇಶ್ವರಿಯ ಪ್ರಾಚೀನ ಉಲ್ಲೇಖವನ್ನು ಕೇನೋಪನಿಷತ್ತಿನಲ್ಲಿ ಕಾಣಬಹುದು. ‘ಉಮಾ ಹೈಮವತಿ’ ಎಂಬ ನಾಮದಿಂದ ದೇವಿಯು ದೇವರಾಜನಾದ ಇಂದ್ರನಿಗೆ ಪರತತ್ತ್ವದ, ಪರಬ್ರಹ್ಮನ, ಪರಮಾತ್ಮನ ವಿಚಾರವಾಗಿ ಉಪದೇಶ ಮಾಡುವ ಅಂಶವನ್ನು ಈ ಉಪನಿಷತ್ತಿನಲ್ಲಿ ನೋಡಬಹುದು. ಶಿವನ ಶಕ್ತಿ ಮತ್ತು ಹೃದಯೇಶ್ವರಿ ಪಾರ್ವತಿ. ಈ ದೇವಿ ಅಸಂಖ್ಯಾತ ನಾಮಗಳಿಂದ ಪೂಜಿಸಲ್ಪಡುವಳು. ಅನೇಕ ಹೆಸರುಗಳಿಂದ ಕೂಡಿರುವಳು. ಹೈಮವತಿ, ಗಿರಿಜೆ, ದಾಕ್ಷಾಯಣಿ, ಮೃಡಾನಿ, ರುದ್ರಾಣಿ, ಶರ್ವಾಣಿ, ಚಾಮುಂಡೇಶ್ವರಿ...
ಪುರಾಣಗಳ ಅನುಸಾರ ದೇವಿಯ ಮೊದಲ ಅವತಾರ ದಕ್ಷಪ್ರಜಾಪತಿಯ ಮತ್ತು ಪ್ರಸೂತಿಯ ಮಗಳು ದಾಕ್ಷಾಯಣಿಯಾಗಿ ಮಹಾಶಿವನನ್ನು ವರಿಸುತ್ತಾಳೆ. ಒಂದು ಸಲ ದಕ್ಷನು ಮಹಾಯಾಗ ಕೈಗೊಂಡಾಗ ಶಿವನನ್ನು ಆಮಂತ್ರಿಸಲಿಲ್ಲ. ದಾಕ್ಷಾಯಣಿ ಶಿವನ ಬುದ್ಧಿವಾದವನ್ನು ಅಲಕ್ಷಿಸಿ ಆಮಂತ್ರಣ ಇಲ್ಲದಿದ್ದರೂ ದಕ್ಷಯಜ್ಞಕ್ಕೆ ಹೋದಳು. ದಕ್ಷನ ಉಪೇಕ್ಷೆ, ಶಿವನಿಂದೆಯಿಂದ ಕುಪಿತಳಾಗಿ ಯೋಗಾಗ್ನಿಯಿಂದ ತನ್ನನ್ನು ತಾನೇ ದಹಿಸಿಕೊಂಡಳು. ಮತ್ತೆ ದೇವಿ ಪುನರ್ಜನ್ಮ ಪಡೆದು ಹಿಮವಂತ ಮತ್ತು ಮೇನಾದೇವಿ ಪುತ್ರಿಯಾಗಿ ‘ಪಾರ್ವತಿ’ ನಾಮದಿಂದ ಕರೆಯಲ್ಪಟ್ಟಳು. ಕಠೋರ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಪುನಃ ಅವನ ಪತ್ನಿಯಾದಳು.
ಮಹಿಷಾಸುರ ಮರ್ದಿನಿ: ಮಹಿಷಾಸುರ ಎಂಬ ರಕ್ಕಸ ದೇವತೆಗಳಿಗೆ ತೊಂದರೆ ಕೊಡುತ್ತಿದ್ದ. ದೇವತೆಗಳೆಲ್ಲ ದೇವಿಗೆ ಮೊರೆಹೋದರು. ಈ ದಾನವನಿಂದ ಆಗುತ್ತಿರುವ ಕಿರುಕುಳ, ಅನ್ಯಾಯಗಳನ್ನು ದೇವತೆಗಳೆಲ್ಲರಿಂದ ಕೇಳಿ, ದೇವತ್ರಯರಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರರು ಕುಪಿತರಾದರು. ಅವರ ಕ್ರೋಧದಿಂದ ಹೊರಬಿದ್ದ ತೇಜಸ್ಸು ಹಾಗೂ ಇತರ ದೇವತೆಗಳ ತೇಜಸ್ಸಿನಿಂದ ಒಡಗೂಡಿ ದೇವಿ ರೂಪವನ್ನು ತಳೆದು ಎಲ್ಲ ದೇವತೆಗಳ ಶಕ್ತಿಯಿಂದ ದೇವಿಯ ಅವಯವಗಳು ಮೂಡಿದವು ಹಾಗೂ ಆಯುಧಗಳು ದೇವಿಯ ಕೈ ಸೇರಿದವು. ದೇವಿ ಘೊರ ಶಸ್ತ್ರಾಸ್ತ್ರಗಳಿಂದ ಕೂಡಿ ಸಿಂಹವನ್ನೇರಿ ಮಹಿಷಾಸುರರನ್ನು ಸಂಹರಿಸಿದಳು. ಅವನ ಸೈನ್ಯವನ್ನು ಸಹ ನಾಶ ಮಾಡಿದಳು. ಮಹಿಷಾಸುರನನ್ನು ಸಂಹರಿಸಿದ್ದರಿಂದ ದೇವಿ ‘ಮಹಿಷಾಸುರ ಮರ್ದಿನಿ’ಯಾದಳು. ಮೈಸೂರಿನ ಚಾಮುಂಡಿ ದೇವಾಲಯಕ್ಕೆ ಹೋದಾಗ ಬೃಹತ್ತಾದ ಮಹಿಷಾಸುರನ ವಿಗ್ರಹ ನೋಡಬಹುದು.
ಚಂಡ-ಮುಂಡರ ಸಂಹಾರ: ಚಂಡ ಮತ್ತು ಮುಂಡ ಎಂಬ ರಾಕ್ಷಸರು ಅಣ್ಣತಮ್ಮಂದಿರು. ಇವರೂ ದೇವತೆಗಳಿಗೆ ತೊಂದರೆ ಕೊಡುತ್ತಿದ್ದರು. ದೇವತೆಗಳು ಬೇರೆ ದಾರಿಕಾಣದೆ ದೇವಿಯನ್ನು ಪ್ರಾರ್ಥಿಸಿದರು. ಆಗ ದೇವಿ ಪ್ರತ್ಯಕ್ಷಳಾಗಿ ಚಂಡಮುಂಡರೊಡನೆ ವರ್ಷಗಳ ಕಾಲ ಯುದ್ಧ ಮಾಡಿ ಅವರಿಬ್ಬರನ್ನು ಕಾಳಿಯ ರೂಪ ಧರಿಸಿ ಸಂಹರಿಸಿದಳು. ಚಂಡನನ್ನು ಸಂಹಾರ ಮಾಡಿದ್ದರಿಂದ ದೇವಿಗೆ ‘ಚಂಡಿ’ ಎಂಬ ಹೆಸರು ಬಂತು. ಚಂಡಮುಂಡರಿಬ್ಬರನ್ನು ಸಂಹರಿಸಿದ್ದ ರಿಂದ ದೇವಿ ‘ಚಾಮುಂಡಿ’ ಎಂಬ ಹೆಸರು ಪಡೆದು ವಿಶ್ವದಲ್ಲಿ ಖ್ಯಾತಳಾದಳು. ನಂತರ ಮೈಸೂರಿನ ಒಂದು ಬೆಟ್ಟದಲ್ಲಿ ನೆಲೆಸಿದಳು. ಇವಳೇ ‘ಚಾಮುಂಡೇಶ್ವರಿ ದೇವಿ’ಯಾಗಿ ಭಕ್ತರ ಕಷ್ಟಗಳನ್ನು ಪರಿಹರಿಸುತ್ತ ಬಂದಿರುವಳು. ಮೈಸೂರಿನ ರಾಜಮನೆತನದವರಿಗೆ ಮನೆದೇವರಾಗಿ ಅವರ ಮತ್ತು ನಾಡಿನ ಜನರ ಇಷ್ಟಾರ್ಥವನ್ನು ಪೂರೈಸುತ್ತ ಬಂದಿರುವಳು.
ದ್ರಾವಿಡ ಶೈಲಿಯ ದೇವಾಲಯ: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಎಂಟು ಭುಜ ಇರುವ ಚಾಮುಂಡೇಶ್ವರಿ ದೇವಿ ಗರ್ಭಗುಡಿಯಲ್ಲಿ ಆಸೀನಳಾಗಿದ್ದಾಳೆ. ಸಾವಿರಾರು ವರ್ಷಗಳಿಗೂ ಹೆಚ್ಚಿನ ಹಿನ್ನೆಲೆಯಿರುವ ಈ ದೇವಾಲಯದ ಜೀಣೋದ್ಧಾರವನ್ನು 1827ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮಾಡಿಸಿ ಮಹಾದ್ವಾರದ ಮೇಲೆ ಈಗಿರುವ ದೊಡ್ಡ ಗೋಪುರ ಕಟ್ಟಿಸಿದರು. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಗರ್ಭಗುಡಿ ಮೇಲೆ ವಿಮಾನಶಿಖರಗಳಿವೆ. ಇದರ ಮೇಲೆ ಏಳು ಚಿನ್ನದ ಕಲಶಗಳಿವೆ.
(ಲೇಖಕರು ಅಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರರು)