

ಗಂಗಾವತಿ: ನರೇಗಾ ಯೋಜನೆಯಿಂದ ಹೊರಗಿರುವ ಕುಟುಂಬಗಳಿಗೆ ಕೆಲಸ ನೀಡಲಾಗುತ್ತಿದ್ದು, ಕೆಲಸಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಾಪಂ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಹೇಳಿದರು.
ತಾಲೂಕಿನ ಗಡ್ಡಿ ಕೆರೆಯಲ್ಲಿ ವಡ್ಡರಹಟ್ಟಿ ಮತ್ತು ಆಗೋಲಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರಿಗಾಗಿ ಆರಂಭಿಸಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ದುಡಿಯೋಣ ಬಾ ಮತ್ತು ಸೀ ಚೇತನ ಅಭಿಯಾನದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಸ್ಥಳೀಯವಾಗಿಯೇ ಕೂಲಿ ಕೆಲಸ ಮಾಡಲು ನರೇಗಾ ಯೋಜನೆ ಸಹಕಾರಿಯಾಗಿದ್ದು, ಯೋಜನೆಯಿಂದ ಹೊರಗುಳಿದವರನ್ನು ಗುರುತಿಸಲಾಗುತ್ತಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೆ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗುವುದು. ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಗ್ರಾಪಂಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು. ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬಗಳು ಮತ್ತು ದುರ್ಬಲ ವರ್ಗಗಳ ಕುಟುಂಬಗಳ ಗುರುತಿಸುವುದು, ಮಹಿಳೆಯರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಅಭಿಯಾನದ ಉದ್ದೇಶವಾಗಿದೆ ಎಂದರು.
ಪಿಡಿಒ ಸುರೇಶ ಛಲುವಾದಿ ಮಾತನಾಡಿ, ಕೂಲಿಕಾರರ ಕೆಲಸದ ಪ್ರಮಾಣದ ಮೇಲೆ ಕೂಲಿ ನಿಗದಿಯಾಗಲಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಹೂಳೆತ್ತುವ ಕಾಮಗಾರಿಯಿಂದ ಕೆರೆಗಳ ಅಭಿವದ್ಧಿಯಾಗಲಿದೆ ಎಂದರು.
ಐಇಸಿ ತಾಲೂಕು ಸಂಯೋಜಕ ಬಾಳಪ್ಪ ತಾಳಕೇರಿ, ನರೇಗಾ ತಾಂತ್ರಿಕ ಸಹಾಯಕರಾದ ಕೊಟ್ರೇಶ ಜವಳಿ, ಉದಯಕುಮಾರ್, ಶರಣಯ್ಯ, ಗಾದಿಲಿಂಗಪ್ಪ ಇತರರಿದ್ದರು.