

ಮೈಸೂರು: ಹೋರಾಟದ ವೇಳೆ ಜೈಲಿಗೆ ಹೋಗಲು ತುಂಬಾ ಆಸೆಯಿತ್ತಾದರೂ ಪೊಲೀಸರು ನನ್ನನ್ನು ಬಿಟ್ಟು ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೇ ನೆನಪು ಮೆಲುಕು ಹಾಕಿದರು.
ರಾಮಕೃಷ್ಣನಗರದ ರಮಾಗೋವಿಂದ ಸಭಾಂಣದಲ್ಲಿ ಶನಿವಾರ ಅಭಿರುಚಿ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ.ಮಲ್ಲೇಶ್ ರಚಿಸಿದ್ದ ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾಲೇಜು ದಿನಗಳಿಂದಲೂ ಪ.ಮಲ್ಲೇಶ್ ಅವರೊಂದಿಗೆ ಒಡನಾಟ ಇತ್ತು. ಅವರು ನಡೆಸುತ್ತಿದ್ದ ಪ್ರಿಂಟಿಂಗ್ ಪ್ರೆಸ್‌ಗೆ ಹಲವು ಸಾಹಿತಿಗಳು, ವಿಚಾರವಾದಿಗಳು ಬರುತ್ತಿದ್ದರು. ಅವರ ಪ್ರಭಾವದಿಂದ ಹಲವು ಹೋರಾಟದಲ್ಲಿ ತೊಡಗಿಸಿಕೊಂಡಿದ್ದೆ. ಕನ್ನಡ ಪರ ಹೋರಾಟದ ಸಮಯದಲ್ಲಿ ಪ.ಮಲ್ಲೇಶ್ ಅವರು ನಮ್ಮನ್ನೆಲ್ಲಾ ಹೋರಾಟಕ್ಕೆ ಧುಮುಕುವಂತೆ ಮಾಡಿದ್ದರು ಎಂದರು.
ಹೋರಾಟವೊಂದರಲ್ಲಿ ತೊಡಗಿಸಿಕೊಂಡಿದ್ದಾಗ ಎಲ್ಲರನ್ನೂ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸುತ್ತಿದ್ದರು. ಈ ವೇಳೆ ನಾನು ಮನೆಯಲ್ಲಿ ಆರು ತಿಂಗಳು ಜೈಲಿಗೆ ಹಾಕುತ್ತಾರೆ. ಹಾಗಾಗಿ ಯಾರೂ ಗಾಬರಿಯಾಗಬೇಡಿ ಎಂದು ಹೇಳಿ ಬಂದಿದ್ದೆ. ಸಯ್ಯಜಿರಾವ್ ರಸ್ತೆಯಲ್ಲಿ ಪ್ರತಿಭಟನೆ ಮಾಡುವಾಗ ದೇವರಾಜ ಠಾಣೆ ಇನ್ಸ್‌ಪೆಕ್ಟರ್ ಅಗಿದ್ದ ಹಾಲಪ್ಪ ಅವರು ಪ.ಮಲ್ಲೇಶ್, ಕೆ.ರಾಮದಾಸ್, ನನ್ನನ್ನೂ ಸೇರಿದಂತೆ ಹಲವರನ್ನು ಠಾಣೆಗೆ ಕರೆದುಕೊಂಡು ಹೋಗಿ ರಾತ್ರಿಯಲ್ಲ ಅಲ್ಲಿಯೇ ಇರಿಸಿಕೊಂಡಿದ್ದರು. ಮನೆಯಲ್ಲಿ ನಾನು ಹೇಳಿದ್ದರಿಂದ ಜೈಲಿಗೆ ಕಳುಹಿಸುತ್ತಾರೆ ಎಂದೇ ಭಾವಿಸಿದ್ದೆ. ಆದರೆ ಮಲ್ಲೇಶ್, ರಾಮದಾಸ್ ಅವರನ್ನು ಜೈಲಿಗೆ ಕಳುಹಿಸಿ, ನನ್ನನ್ನು ಮನೆಗೆ ಹೋಗು ಎಂದು ಬಿಟ್ಟು ಕಳುಹಿಸಿದ್ದರು. ಹೋರಾಟದ ಸಮಯದಲ್ಲಿ ಜೈಲಿಗೆ ಹೋಗಬೇಕು ಎನ್ನುವುದು ಈಡೇರಲಿಲ್ಲ ಎಂದರು.
ಕರಿ ಕೋಟ್ ಹಾಕಿಸಿ ಕರೆದೊಯ್ದಿದ್ದೆ:
ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧವೂ ಪ್ರತಿಭಟನೆ ನಡೆಸಲಾಗಿತ್ತು. ಆಗ ಪೊಲೀಸ್ ವರಿಷ್ಠಾಧಿಕಾರಿ ಅಗಿದ್ದ ಸುಬ್ಬಯ್ಯ ಅವರನ್ನು ಗುಂಡೂರಾವ್ ಅವರು ತರಾಟೆಗೆ ತೆಗೆದುಕೊಂಡು ಬೈಯ್ದಿದ್ದರು. ಇದೇ ಸಿಟ್ಟಿನಿಂದ ಪ.ಮಲ್ಲೇಶ್, ಕೆ.ರಾಮದಾಸ್ ಅವರನ್ನು ಹೇಗಾದರೂ ಬಂಧಿಸಲೇಬೇಕು ಎಂದು ಪಣತೊಟ್ಟಿದ್ದರು ಎಂದು ಹೇಳಿದರು.
ಆದರೆ ನಾನು ಅವರಿಬ್ಬರ ಪರ ಜಾಮೀನು ಅರ್ಜಿ ಸಲ್ಲಿಸಿ ವಾದ ಮಾಡಿ ಜಾಮೀನು ಕೊಡಿಸಿದ್ದೆ. ಆದರೂ ಕೋರ್ಟ್ ಹೊರಗೆ ಬಂಧಿಸಲು ಪೊಲೀಸರು ಕಾಯ್ದಿದ್ದರು. ಈ ಸಮಯದಲ್ಲಿ ಹಿರಿಯ ವಕೀಲರಾಗಿದ್ದ ಟಿ.ವಿ.ಶ್ರೀನಿವಾಸರಾವ್ ಅವರ ಸಹಾಯ ಕೇಳಿದಾಗ ಅವರು ಪೊಲೀಸರನ್ನು ನಾನು ಮಾತನಾಡಿಸುತ್ತಾ ಇರುತ್ತೇನೆ, ಆ ಸಮಯ ನೋಡಿಕೊಂಡು ಹೊರಗೆ ಕರೆದುಕೊಂಡು ಹೋಗಲು ಸಲಹೆ ನೀಡಿದರು. ಅದರಂತೆ ಕೆ.ರಾಮದಾಸ್ ಅವರಿಗೆ ಕರಿ ಕೋಟ್ ಹಾಕಿಸಿ ಹೊರಗೆ ಕಳುಹಿಸಿಬಿಟ್ಟೆ. ಪ.ಮಲ್ಲೇಶ್ ಅವರು ಕರಿ ಕೋಟ್ ಹಾಕಲು ಒಪ್ಪದಿದ್ದಾಗ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅಲ್ಲಿಂದ ವೇಗವಾಗಿ ಕರೆದುಕೊಂಡು ಹೋಗಿ ಸ್ನೇಹಿತರೊಬ್ಬರ ಮನೆಯಲ್ಲಿ ಇರಿಸಿದ್ದೆ ಎಂದು ನೆನಪು ಮಾಡಿಕೊಂಡರು.
ಊಟಕ್ಕೆ ಕರೆದು ಜಗಳ ಮಾಡಿದ್ದರು:
ಮಲ್ಲೇಶ್ ಅವರು ಎಲ್ಲಿಯೇ ಅಸಮಾನತೆ, ಅನ್ಯಾಯ ಕಂಡುಬಂದರೆ ಸಿಡಿದೇಳುತ್ತಿದ್ದರು. ಯಾರು ಏನೇ ತಪ್ಪು ಮಾಡಿದರೂ ಅದನ್ನು ನೇರವಾಗಿ ಹೇಳುವ ಎದೆಗಾರಿಕೆ ಅವರಲ್ಲಿ ಇತ್ತು. ಒಮ್ಮೆ ನನ್ನನ್ನು ಅವರ ಮನೆಗೆ ಊಟಕ್ಕೆ ಕರೆದು ಜಗಳ ಮಾಡಿಬಿಟ್ಟರು. ಆದರೂ ನಾನೂ ಜಗಳ ಮಾಡಿಕೊಂಡೇ ಭಂಡತನದಿಂದ ಊಟ ಮಾಡಿಯೇ ಬಂದಿದ್ದೆ. ಮರುದಿನ ಅವರೇ ಕರೆದು ಮಾತನಾಡಿಸಿದ್ದರು. ಮನಸ್ಸಿನಲ್ಲಿ ಏನನ್ನು ಇಟ್ಟುಕೊಳ್ಳದಂತಹ ವ್ಯಕ್ತಿ ಅವರು ಎಂದು ಹೇಳಿದರು.
ಹೋರಾಟದ ಜತೆಗೆ ಸಾಹಿತ್ಯದಲ್ಲಿಯೂ ಆಸಕ್ತಿ ಇದ್ದರೂ ಹೆಚ್ಚು ಬರೆಯಲು ಅವರಿಗೆ ಆಗಲಿಲ್ಲ. ಅವರು ಮನಸ್ಸು ಮಾಡಿದ್ದರೆ ಹಲವಾರು ಕೃತಿಗಳನ್ನು ಬರೆಯಬಹುದಿತ್ತು. ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ.ಮಲ್ಲೇಶ್ ಅವರ ಸಹವಾಸದಿಂದ ನನಗೆ ರಾಜಕೀಯದ ಬಗ್ಗೆ ಆಸಕ್ತಿ ಬಂತು. ಇಲ್ಲದಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.
ಲೇಖಕ ಜಿ.ಪಿ.ಬಸವರಾಜು ಕೃತಿ ಕುರಿತು ಮಾತನಾಡಿದರೆ, ಪ.ಮಲ್ಲೇಶ್ ಅವರ ಪುತ್ರಿ ಸವಿತಾ ಮಲ್ಲೇಶ್ ಅವರು ತಂದೆಗೆ ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿ ಕುರಿತು ಹೇಳಿದರು.
ಒಡನಾಡಿಯಾಗಿದ್ದ ಭಕ್ತ ರಾಮೇಗೌಡ, ಪ.ಮಲ್ಲೇಶ್ ಅವರೊಂದಿಗಿನ ಒಡನಾಟ ನೆನಪು ಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನೃಪತುಂಗ ಕನ್ನಡ ವಿಕಾಸ ವಿದ್ಯಾಸಂಸ್ಥೆ ಅಧ್ಯಕ್ಷರೂ ಆದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರಕಾಶಕ ಅಭಿರುಚಿ ಗಣೇಶ್, ಹೋರಾಟಗಾರ ಉಗ್ರ ನರಸಿಂಹೇಗೌಡ ಇದ್ದರು.