ಸಿಎಂ ವಿರುದ್ಧದ ಪ್ರತಿಭಟನೆ ವೇಳೆ ಆಕ್ಷೇಪ, ಒಬ್ಬಂಟಿ ಎಸ್ ಐಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಬಿಜೆಪಿ ಕಾರ್ಯರ್ತರು

IMG_4941.jpg
Published on

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಎಸ್ಐಗೆ ಹಾಕಿದ ಮುತ್ತಿಗೆಯ ಗಲಾಟೆಯು ಕೆಲ ಕಾಲ ಆತಂಕ ಸೃಷಿಸಿತ್ತು.
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದ ಸಂದರ್ಭದಲ್ಲಿ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂಜುಂಡಯ್ಯ ಜನ ಮತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಪ್ರಶ್ನಿಸಿದಕ್ಕೆ ಪರಸ್ಪರ ಮಾತಿನ ಚಕಮಕಿ ಜೋರಾಯಿತು. ಪ್ರತಿಭಟನೆ ವೇಳೆ ಜನರು ಮತ್ತು ವಾಹನಗಳನ್ನು ಬಿಟ್ಟು ಹೋರಾಟವನ್ನು ವಿಫಲಗೊಳಿಸಲಾಗುತ್ತಿದೆ. ಸುಮ್ಮನೆ ಯಾಕೆ ಅಡ್ಡಿಪಡಿಸುತ್ತಿದ್ದೀರಿ? ಎಂದು ಕೆಲ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ರಸ್ತೆಯ ಒಂದು ಬದಿಯಲ್ಲಿ ಓಡಾಟಕ್ಕೆ ಬಿಟ್ಟರೆ ಏನಾಗಲ್ಲ, ತಗಾಧೆ ತೆಗೆಯಬೇಡಿ, ನಮ್ಮ ಕೆಲಸ ಮಾಡಲು ಬಿಡಿ ಎಂದು ಎಸ್ ಐ ಪ್ರತಿಕ್ರಿಯಿಸಿದ್ದಾರೆ.

*ಪೊಲೀಸರಿಗೆ ಧಿಕ್ಕಾರದ ಘೋಷಣೆಗಳು*
ಮಾತಿನ ಚಕಮಕಿಯೊಂದಿಗೆ ಗಲಾಟೆ ಜೋರಾಗುತ್ತಿದ್ದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಸೇರಿದಂತೆ ಹಲವರು ಪೊಲೀಸ್ ಧೋರಣೆಯನ್ನು ಖಂಡಿಸಿದ್ದು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರ ನಡುವೆಯೂ ವಾಗ್ವಾದ ಜೋರಾಗಿ ನಡೆಯಿತು.

*ಕೂಲ್ ಆದ ಪರಿಸ್ಥಿತಿ*
ಕೊನೆಗೆ ಎರಡೂ ಕಡೆಯವರು ಕೆಲ ಕಾಲ ಮಾತಿನ ಚಕಮಕಿ ನಡೆಸಿ ಕೂಲ್ ಆದರು. ಕೆಲಸ ನಿರ್ವಹಣೆಯ ವೇಳೆ ಅನವಶ್ಯಕ ವಾದ, ಗಲಾಟೆ ಬೇಡ ಎಂದು ಮಾತಾಡಿಕೊಂಡರು. ಇದೇ ವೇಳೆ ಹಲವರು ಎಸ್ಐ ನಂಜುಂಡಯ್ಯಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿ, ನಗುವಿನೊಂದಿಗೆ ತೆರಳಿದರು. ಇದರಿಂದ ಪರಿಸ್ಥಿತಿ ತಿಳಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net