

ಮೂಡಿಗೆರೆ: ನನಗೆ ದೊರೆತ ಐದು ತಿಂಗಳ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಭ್ರಷ್ಟಾಚಾರ ರಹಿತವಾಗಿ ಪಟ್ಟಣದ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗಿದೆ ಎಂದು ಪಪಂ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿಪುರ ಕಸ ವಿಲೇವಾರಿ ಘಟಕದಲ್ಲಿ ಹಸಿ ತ್ಯಾಜ್ಯ ಕರಗಿಸಿ ಗೊಬ್ಬರವನ್ನಾಗಿ ಮಾಡಲು ಸ್ವಚ್ಛ ಭಾರತ ಯೋಜನೆಯಡಿ 15.36 ಲಕ್ಷ ರೂ. ಮೀಸಲಿರಿಸಲಾಗಿದೆ. ವಿದ್ಯುತ್ ಸಂಪರ್ಕ ವಿಳಂಬವಾಗಿದ್ದರಿಂದ ಗೊಬ್ಬರ ತಯಾರಿಕಾ ಘಟಕ ಆರಂಭಿಸಿಲ್ಲ. ಸದ್ಯದಲ್ಲೇ ವಿದ್ಯುತ್ ಸಂಪರ್ಕ ಪಡೆದು ಘಟಕ ಆರಂಭಿಸಲಾಗುವುದು. ಪಟ್ಟಣದ ನಿವಾಸಿಗಳಿಗೆ ನೀರೊದಗಿಸುವ ಬೀಜುವಳ್ಳಿ ಕುಡಿಯುವ ನೀರಿನ ಘಟಕಕ್ಕೆ ಪಟ್ಟಣದಿಂದ ಎಕ್ಸ್‌ಪ್ರೆಸ್ ವಿದ್ಯುತ್‌ಲೈನ್ ಸಂಪರ್ಕ ನೀಡಲಾಗುವುದು. ಅದರ ಕಾಮಗಾರಿ ನಡೆಯುತ್ತಿದೆ. ಅಲ್ಲಿಗೆ 40 ಮತ್ತು 10 ಹೆಚ್‌ಪಿ ಸಾಮರ್ಥ್ಯದ ಎರಡು ಹೊಸ ಪಂಪ್‌ಸೆಟ್ ಅಳವಡಿಸಲಾಗಿದೆ ಎಂದರು.
ಸುಂಡಕೆರೆ ಹಳ್ಳದ ದಡದಲ್ಲಿರುವ ಬಾವಿ ಹೂಳು ತೆರವುಗೊಳಿಸಲಾಗಿದೆ. ಸೋರಿಕೆಯಾಗುತ್ತಿದ್ದ ಮುಖ್ಯಪೈಪ್ ದುರಸ್ತಿ ಪಡಿಸಲಾಗಿದೆ. ಕಿತ್ತಲೆಗಂಡಿ ಗ್ರಾಮದ ಹೇಮಾವತಿ ನದಿಯಿಂದ ಪಟ್ಟಣಕ್ಕೆ ನೀರೊದಗಿಸುವ ಘಟಕಕ್ಕೆ 60 ಎಚ್‌ಪಿ ಸಾಮರ್ಥ್ಯದ ಹೊಸ ಪಂಪ್‌ಸೆಟ್ ಅಳವಡಿಸಲಾಗಿದೆ. 35 ಎಚ್‌ಪಿಯ ಇನ್ನೊಂದು ಪಂಪ್‌ಸೆಟ್ ಹಳೆಯದಾಗಿರುವ ಕಾರಣ ಅದರ ಸಾಮರ್ಥ್ಯ ಕಡಿಮೆಯಾಗಿದೆ. ವೋಲ್ಟೇಜ್ ಸಮಸ್ಯೆಯಿಂದಲೂ ಪಂಪ್‌ಸೆಟ್ ಸ್ಥಗಿತಗೊಳ್ಳುತ್ತಿದೆ. ಇದರಿಂದ ಪಟ್ಟಣದ ಕೆಲ ಬಡಾವಣೆಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
14 ಮಂದಿ ನೀರು ಪೂರೈಕೆ ಸಹಾಯಕರಿಗೆ ಬಾಕಿ ಉಳಿದಿದ್ದ ವೇತನ ಪಾವತಿಸಲಾಗಿದೆ. ನೀರು ಪೂರೈಕೆ ಸಹಾಯಕರನ್ನು ಟೆಂಡರ್‌ಮೂಲಕ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಪ.ಜಾತಿಯ 11 ಮಂದಿಗೆ ಕಲ್ಯಾಣ ಕಾರ್ಯಕ್ರಮ ಯೋಜನೆಯಲ್ಲಿ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು 10 ಮಂದಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು. ಪೊಲೀಸ್ ಠಾಣೆ ಎದುರು ಸಾರ್ವಜನಿಕ ಶೌಚಗೃಹ ನಿರ್ಮಿಸಲು 9 ಲಕ್ಷ ರೂ., ಹೊಯ್ಸಳ ಕ್ರೀಡಾಂಗಣದಲ್ಲಿ ಶೌಚಗೃಹ ನಿರ್ಮಾಣಕ್ಕೆ 6 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.