

ವಿಜಯಪುರ: ಪಟ್ಟಣ ಸಮೀಪದ ಗಡ್ಡನಾಯಕನಹಳ್ಳಿಯಲ್ಲಿರುವ ದುರ್ಗಾಮಹೇಶ್ವರಿ ಅಮ್ಮನವರ ದೇವಾಲಯದಲ್ಲಿ ನವರಾತ್ರಿ ನಿಮಿತ್ತ ಅ.3ರಿಂದ ವಿಶೇಷ ಪೂಜಾ ಕಾರ್ಯ ಏರ್ಪಡಿಸಲಾಗಿದೆ.
ಪೂಜಾ ಕಾರ್ಯದ ಉಸ್ತುವಾರಿ ವಹಿಸಿರುವ ಪರಿಶ್ರಮ ನೀಟ್ ಅಕಾಡೆಮಿ ಮುಖ್ಯಸ್ಥ ಪ್ರದೀಪ್ ಈಶ್ವರ್ ಮಾತನಾಡಿ, ತಾಯಿಯ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ನಾಡಿನ ಒಳಿತಿಗಾಗಿ ಪೂಜೆ ಕೈಗೊಂಡಿದ್ದು, ಹೋಮ, ಹವನ, ಅನ್ನದಾನ, ವಸ್ತ್ರದಾನ ಕಾರ್ಯಕ್ರಮದಲ್ಲಿ ಕೈಜೋಡಿಸಿರುವುದಾಗಿ ತಿಳಿಸಿದರು.
ಅ.3ರಂದು ಬೆಳಗ್ಗೆ 4 ಗಂಟೆಗೆ ದೀಪಾರಾಧನೆಯಿಂದ ಪೂಜೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12ಕ್ಕೆ ಶ್ರೀ ಅಮ್ಮನವರ ಪಲ್ಲಕ್ಕಿ ಉತ್ಸವ, ಶ್ರೀ ವೀರಭದ್ರಸ್ವಾಮಿ ಕುಣಿತ, ವರಲಕ್ಷ್ಮೀ ಅವರಿಂದ ಕಥಾ ಕಾಲಕ್ಷೇಪ, ಸಂಜೆ 4ಕ್ಕೆ ಎಂ.ವಿ. ನಾಯ್ಡು ನೃತ್ಯ ತಂಡದಿಂದ ಭಕ್ತಿ ಗೀತೆ ಗಾಯನ ಏರ್ಪಡಿಸಲಾಗಿದೆ.
ಅ.4ರಂದು ಬೆಳಗ್ಗೆ 4ರಿಂದ ವಿಶೇಷ ಪೂಜೆ ಆಯೋಜಿಸಿದ್ದು, ಬೆಳಗ್ಗೆ 10ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ, ಪ್ರಸಾದ ವಿನಿಯೋಗ, ಮಧ್ಯಾಹ್ನ 12ಕ್ಕೆ ದುರ್ಗಾಮಹೇಶ್ವರಿ ಅಮ್ಮನವರ ಅಂಬಾರಿ ಉತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ಕುಣಿತ, ಧರ್ಮಸ್ಥಳದ ಮಂಜುಳಾ ಮತ್ತು ತಂಡದವರಿಂದ ಡೋಲು ಕುಣಿತ ಏರ್ಪಡಿಸಲಾಗಿದೆ. ಬಳಿಕ ಬೆಂಗಳೂರಿನ ಶೀಲಾನಾಯ್ಡು ಅವರಿಂದ ಕಥಾ ಕಾಲಕ್ಷೇಪ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಜೂನಿಯರ್ ಘಂಟಸಾಲ ಲಕ್ಷ್ಮೀಪತಿ ಅವರಿಂದ ಭಕ್ತಿಗೀತೆ ಗಾಯನ, ರಾತ್ರಿ 7ಕ್ಕೆ ಗಣೇಶ್‌ಭಟ್ ಉಡುಪಿ ಅವರಿಂದ ಯಕ್ಷಗಾನ ಏರ್ಪಡಿಸಲಾಗಿದೆ.
ಅ.5ರಂದು ಬೆಳಗ್ಗೆ 4ಕ್ಕೆ ವಿಶೇಷ ಪೂಜಾ ನೆರವೇರಲಿವೆ. ಮಧ್ಯಾಹ್ನ 12ಕ್ಕೆ ದೇವಿಯ ಪಲ್ಲಕ್ಕಿ ಉತ್ಸವ, ಮಂಡಿಬೆಲೆ ವೆಂಕಟೇಶ್ ಅವರಿಂದ ಭರತ ನಾಟ್ಯ, ಸಂಜೆ 4ಕ್ಕೆ ವಿಶ್ವ ವಿಜೇತಸ್ವಾಮಿ ವಿವೇಕಾನಂದ ಬಳಗದಿಂದ ಶ್ರೀ ದುರ್ಗಾ ಮಹೇಶ್ವರಿ ಲೀಲಾ ವೈಭವ ಗಾನ ಕಥಾ ಮಾಲಿಕೆ ಆಯೋಜಿಸಲಾಗಿದೆ. ಸಂಜೆ 7ಕ್ಕೆ ಪರಿವರ್ತನಾ ಕಲಾ ತಂಡದವರಿಂದ ನಾಟಕ ಮತ್ತು ಗೀತೆ ಗಾಯನ ಏರ್ಪಡಿಸಲಾಗಿದೆ.