

ಹೊಳೆಹೊನ್ನೂರು: ಶ್ರೀಕ್ಷೇತ್ರ ಕೂಡ್ಲಿ ಗ್ರಾಮದೇವತೆ ದುರ್ಗಮ್ಮ ದೇವಿಯ ನೂತನ ಶಿಲಾ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಗೃಹ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀದೇವಿಗೆ ಪುಣ್ಯತೀರ್ಥ, ಪಂಚಾಮೃತ, ಕ್ಷೀರಾಭಿಷೇಕ ಮಾಡಲಾಯಿತು. ಪ್ರಾಣ ಪ್ರತಿಷ್ಠಾಪನೆ, ಗೋಪುರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ನಂತರ ಗಣಪತಿ, ನವಗ್ರಹ ಹಾಗೂ ಕಲಾಹೋಮ ನಡೆಸಲಾಯಿತು.
ಹೊಳೆಹೊನ್ನೂರು ಗ್ರಾಮದೇವತೆ ಶ್ರೀ ಹೊನ್ನೂರಮ್ಮ ದೇವಿ, ಕೂಡ್ಲಿ ಗ್ರಾಮದ ಶ್ರೀ ಹಳದಮ್ಮ ದೇವಿ, ಚಿಕ್ಕೂಡ್ಲಿ ಶ್ರೀ ದುರ್ಗಮ್ಮ ದೇವಿ, ಹೊಳೆಹಟ್ಟಿ ಶ್ರೀ ಹುಡಸಲಮ್ಮ ದೇವಿ, ಹಾರೋಬೆನವಳ್ಳಿ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಕರೆ ತರಲಾಗಿತ್ತು.
ಕೂಡ್ಲಿ ಶ್ರೀ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಮಠದ ಶಿಷ್ಯರು ವೇದಘೋಷ ಪಠಿಸಿದರು. ಶಿವಮೊಗ್ಗದ ಅರುಣಾಚಲ ಅಯ್ಯರ್ ಹಾಗೂ ಕೂಡ್ಲಿ ಚಂದ್ರಶೇಖರ್ ಅಯ್ಯರ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಮೂರು ದಿನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.