ಮಂಗಳಾದೇವಿಗೆ ದುರ್ಗಾದೇವಿ ಅಲಂಕಾರ

mangaladevi
Published on

ಮಂಗಳೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಶನಿವಾರ ಆರಂಭಗೊಂಡಿತು.

ಬೆಳಗ್ಗೆ ಶಾಸೋಕ್ತವಾಗಿ ಗಣಪತಿ ಪ್ರಾರ್ಥನೆಯೊಂದಿಗೆ ನವರಾತ್ರಿ ಉತ್ಸವ ಚಾಲನೆ ಪಡೆಯಿತು. ಮಂಗಳಾದೇವಿಗೆ ಮೊದಲ ದಿನದ ದುರ್ಗಾದೇವಿ ಅಲಂಕಾರ, ಬೆಳಗ್ಗೆ, ಮಧ್ಯಾಹ್ನ, ಸಂಜೆ ವಿಶೇಷ ಪೂಜೆ ನಡೆಯಿತು. ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ, ಟ್ರಸ್ಟಿಗಳಾದ ಬಿ.ರಾಮನಾಯ್ಕ ಕೋಟೆಕಾರ್, ಪ್ರೇಮಲತಾ ಎಸ್.ಕುಮಾರ್, ಆನುವಂಶಿಕ ಮೊಕ್ತೇಸರ ಮತ್ತು ಪ್ರಧಾನ ಅರ್ಚಕ ಜಿ.ರಘುರಾಮ ಉಪಾಧ್ಯಾಯ, ಸ್ಥಳೀಯ ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

ಮೂಡುಬಿದಿರೆ ಸಾಂಕೇತಿಕ ದಸರಾ ಚಾಲನೆ

ಮೂಡುಬಿದಿರೆ: ೭೫ನೇ ವರ್ಷದ ಐದು ದಿನಗಳ ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಸಮಾಜ ಮಂದಿರದ ದಸರಾ ಉತ್ಸವದ ಉದ್ಘಾಟನೆ ಕರೊನಾ ನಿರ್ಬಂಧ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ಶನಿವಾರ ಸಾಂಕೇತಿಕವಾಗಿ ಜರುಗಿತು.

ಶ್ರೀ ಶಾರದಾ ಮಾತೆಯ ವಿಗ್ರಹಕ್ಕೆ ಅರ್ಚಕ ಹರೀಶ ಭಟ್ ಪೂಜೆ ಸಲ್ಲಿಸಿ ಕರೊನಾ ನಿವಾರಣೆಗಾಗಿ ಪ್ರಾರ್ಥಿಸಿದರು.

ಸಮಾಜಮಂದಿರ ಸಭಾ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಸರಸ್ವತಿ ಸೇವಾ ಸಂಘ ಮೂಲಕ ಏಳೂವರೆ ದಶಕಗಳ ಹಿಂದೆ ಮೂಡುಬಿದಿರೆಯಲ್ಲಿ ಆರಂಭಗೊಂಡ ಈ ದಸರಾ ಉತ್ಸವ ನಾಡಿನಲ್ಲಿ ತನ್ನ ಹಿರಿತನ ಮತ್ತು ಕನ್ನಡ ನಾಡಿನ ಸಾಹಿತ್ಯ ಲೋಕದ ಬಹುತೇಕ ಗಣ್ಯರೆಲ್ಲರ ಪಾಲ್ಗೊಳ್ಳುವಿಕೆಯಿಂದ ಗಮನ ಸೆಳೆದಿದೆ. ಕರೊನಾ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಉತ್ಸವ ಶಾರದಾಪೂಜೆಗೆ ಸೀಮಿತಗೊಳಿಸಬೇಕಾಗಿದೆ. ೭೫ರ ಸಂಭ್ರಮವನ್ನು ಮುಂದಿನ ವರ್ಷಗಳಲ್ಲಿ ಮೂಡುಬಿದಿರೆ ಉತ್ಸವವಾಗಿ ನಡೆಸುವ ಚಿಂತನೆಯಿದೆ ಎಂದರು.

ಸಮಾಜಮಂದಿರ ಸಭಾ ಕಾರ್ಯದರ್ಶಿ ಎಚ್.ಸುರೇಶ್ ಪ್ರಭು, ಎಂ.ಗಣೇಶ್ ಕಾಮತ್, ಕೋಶಾಧಿಕಾರಿ ವಾಸುದೇವ ರಾವ್, ದಸರಾ ಉತ್ಸವ ಸಂಚಾಲಕ ಸಂಚಾಲಕ ಡಾ.ಪುಂಡಿಕಾ ಗಣಪಯ್ಯ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

೨೧ಕ್ಕೆ ಪಡೀಲ್ ಕರ್ಮಾರ್ ಶಾರದೋತ್ಸವ

ಮಂಗಳೂರು: ಅಳಪೆ ಕರ್ಮಾರ್ ಪಡೀಲಿನ ಶ್ರೀ ಶಾರದಾಂಬ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ೧೫ನೇ ವರ್ಷದ ಶ್ರೀಶಾರದೋತ್ಸವ ವೇದಮೂರ್ತಿ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಅ.೨೧ರಂದು ಕರ್ಮಾರ್‌ನ ಆದರ್ಶ ಶಾಲಾ ವಠಾರದಲ್ಲಿ ನಡೆಯಲಿದೆ.

ಬೆಳಗ್ಗೆ ೭.೪೫ಕ್ಕೆ ಗಣಹೋಮ, ೯.೪೫ಕ್ಕೆ ಶ್ರೀಶಾರದಾ ದೇವಿ ಪ್ರತಿಷ್ಠಾಪನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೪ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. ಭಕ್ತರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಪ್ರಕಾರ ಬರಬೇಕು ಎಂದು ಸಮಿತಿ ಅಧ್ಯಕ್ಷ ರಾಜೇಶ್ ಎಚ್.ಜಲ್ಲಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಟಿಪಳ್ಳದಲ್ಲಿ ಯಕ್ಷೋತ್ಸವ

ಸುರತ್ಕಲ್: ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಶರನ್ನವರಾತ್ರಿ, ವಿಜಯ ದಶಮಿ, ಯಕ್ಷೋತ್ಸವ ಕಾರ್ಯಕ್ರಮ ಶನಿವಾರ ಆರಂಭವಾಗಿದ್ದು ಅ.೨೬ರ ವರೆಗೆ ನಡೆಯಲಿದೆ. ಈ ಸಂದರ್ಭ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಧಾರ್ಮಿಕ ಕಾರ್ಯಕ್ರಮ, ಸಂಜೆ ೬ರಿಂದ ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net