

ಚಿತ್ರದುರ್ಗ: ನೂತನ ಪಿಂಚಣಿ ರದ್ದುಪಡಿಸುವುದು ಸೇರಿ 12 ಬೇಡಿಕೆ ಮುಂದಿಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರಿನಿಂದ ಆರಂಭಿಸಿರುವ ದೆಹಲಿ ಚಲೋ ಯಾತ್ರೆ ಬುಧವಾರ ಚಿತ್ರದುರ್ಗ ಪ್ರವೇಶಿಸಿತು.
ರಾಜ್ಯದಲ್ಲಿ ಏಳನೇ ವೇತನ ಆಯೋಗದ ವೇತನ ಪರಿಷ್ಕರಣೆ ಶೇ.40ರಷ್ಟು ಹೆಚ್ಚಿಸಿ ಕೂಡಲೇ ಜಾರಿಗೊಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿಯಿರುವ 60 ಲಕ್ಷ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ತಡೆಹಿಡಿದ 18 ತಿಂಗಳ ತುಟ್ಟಿಭತ್ಯೆ ತುರ್ತಾಗಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಅನುಕಂಪ ಆಧಾರಿತದಲ್ಲಿ ನೀಡುವ ಕೆಲಸಗಳಿಗೆ ವಿಧಿಸಿರುವ ಎಲ್ಲ ನಿಬಂಧನೆ ರದ್ದುಪಡಿಸಬೇಕು. ರಾಜ್ಯದ ಎಲ್ಲ ಇಲಾಖೆಗಳಲ್ಲಿನ ಎಲ್ಲ ವೃಂದಗಳ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಸಿ ಆ್ಯಂಡ್ ಆರ್ ಪರಿಷ್ಕರಣೆ ಮತ್ತು ಮುಂಬಡ್ತಿ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ, ಆಹಾರ, ಶಿಕ್ಷಣ ಒಳಗೊಂಡಂತೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ, ಅತಿಥಿ ನೌಕರರನ್ನು ನಿಯಮಾನುಸಾರ ಕಾಯಂ ಗೊಳಿಸಿ ಸುಪ್ರೀಂಕೋರ್ಟ್ ಆದೇಶದನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು. ಅಸಂವಿಧಾನಿಕವಾದ ನೌಕರ ವಿರೋಧಿ ಅಂಶಗಳನ್ನು ಕೈಬಿಡಬೇಕು. ನೌಕರ, ಕಾರ್ಮಿಕ ಸಂಘಟನೆಗಳಿಗೆ ಪ್ರಜಾಸತ್ತಾತ್ಮಕ ಹಕ್ಕನ್ನು ಖಾತರಿ ಪಡಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಬೇಕು ಎಂದು ಕೋರಿದರು.
ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ನ. 3ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟದ ಕಾರ್ಯಾಧ್ಯಕ್ಷೆ ಎನ್.ಶೋಭಾ ಲೋಕನಾಗಣ್ಣ ತಿಳಿಸಿದರು.
ಅಧ್ಯಕ್ಷ ಎಚ್.ಎಸ್.ಜೈಕುಮಾರ್, ನಾಗರಾಜ್ ಪತ್ತಾರ್, ಸಂಘಟನಾ ಕಾರ್ಯದರ್ಶಿ ವಿನಯ್ ಇತರರಿದ್ದರು.