ದುರ್ಗಕ್ಕೆ ಬರ ಅಧ್ಯಯನ ತಂಡ

SOMASHEKAR zp CTD ceo
Published on

ನಾಯಕನಹಟ್ಟಿ: ಬರ ವೀಕ್ಷಣೆಗೆ ಆಗಮಿಸುವ ಕೇಂದ್ರ ತಂಡಕ್ಕೆ ಜಿಲ್ಲೆಯಲ್ಲಿನ ಬರದ ಸ್ಪಷ್ಟ ಮತ್ತು ನೈಜ ಚಿತ್ರಣ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಸೋಮಶೇಖರ್ ತಿಳಿಸಿದರು.

ಚಿಕ್ಕಕೆರೆ ಮತ್ತು ರಾಮದುರ್ಗ ಗ್ರಾಮದ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದರು.

ಕೇಂದ್ರ ಸರ್ಕಾರದ ಮೂರು ತಂಡಗಳು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿವೆ. ಇವುಗಳಲ್ಲಿ ನಮ್ಮ ಜಿಲ್ಲೆಗೆ ಮೂರನೇ ತಂಡ ಶನಿವಾರ ಭೇಟಿ ನೀಡಲಿದ್ದು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ್ಲಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ನಾನಾ ರೀತಿಯ ಬೆಳೆಗಳು ಒಣಗಿರುವ ಮತ್ತು ಹಾನಿಯಾಗಿರುವ ಹೊಲಗಳಿಗೆ ಭೇಟಿ ನೀಡಲಿದೆ. ಬರದ ತೀವ್ರತೆಯನ್ನು ಕಡಿಮೆ ಮಾಡಲು ಕೈಗೊಂಡಿರುವ ನರೇಗಾ ಕಾಮಗಾರಿಗಳನ್ನು ಸಹ ತಂಡಕ್ಕೆ ತೋರಿಸಲಾಗುವುದು. ಇಲ್ಲಿನ ಪ್ರದೇಶದಲ್ಲಿ ಕೈಗೊಂಡಿರುವ ಬರ ಪರಿಸ್ಥತಿಯನ್ನು ಪರಿಣಾಮಕಾರಿಯಾಗಿ ಮನಮುಟ್ಟುವ ರೀತಿ ಚಿತ್ರಣದ ಜತೆಗೆ ವಿವರಿಸಲಾಗುವುದು ಎಂದು ಹೇಳಿದರು.’

ಎಡಿಸಿ ಕುಮಾರಸ್ವಾಮಿ ಮಾತನಾಡಿ, ಶನಿವಾರ ಬೆಳಗ್ಗೆ 8.30ಕ್ಕೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದು, 9 ಗಂಟೆ ನಂತರ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತು ವಿವಿಧೆಡೆ ವೀಕ್ಷಣೆಗಾಗಿ ಭೇಟಿ ನೀಡಲಿದ್ದಾರೆ ಎಂದರು.

ಚಿತ್ರದುರ್ಗದಿಂದ ಹೊರಟು ವಿಜಯಪುರ, ಬೀರಾವರ, ಗೋನೂರು, ಹಾಯ್ಕಲ್, ರಾಮದುರ್ಗ, ನಾಯಕನಹಟ್ಟಿ, ಭೀಮಗೊಂಡನಹಳ್ಳಿ, ಹಿರೇಕೆರೆಹಳ್ಳಿ ಕಾವಲ್, ದೊಣ್ಣೆಹಳ್ಳಿಯ ರೈತರ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್, ಉಪಕೃಷಿ ನಿರ್ದೇಶಕರಾದ ಬಿ.ಎನ್.ಪ್ರಭಾಕರ್, ಶಿವಕುಮಾರ್, ಕೃಷಿ ಅಧಿಕಾರಿ ಎನ್.ಹೇಮಂತ ನಾಯಕ್, ಉಪ ತೋಟಗಾರಿಕಾ ನಿರ್ದೇಶಕಿ ಜಿ.ಸವಿತಾ, ಸಹಾಯಕ ಕೃಷಿ ನಿದೇಶಕರಾದ ಜೆ.ಅಶೋಕ್ ನರೇಗ ಎಡಿಎ ಸಂತೋಷ್, ರಾಜಸ್ವ ನಿರೀಕ್ಷಕ ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net