

ಚಿಕ್ಕಮಗಳೂರು: ಶ್ರೀ ದುರ್ಗಾ ಸೇವಾ ಸಮಿತಿ ನಂದಿ ಟ್ರಸ್ಟ್‌ನಿಂದ ಅ. 24ರವರೆಗೆ ವಿಜಯಪುರದಲ್ಲಿ ದುರ್ಗಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಗೌರವ ಅಧ್ಯಕ್ಷ ಅನಿಲ್ ತಿಳಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿಜಯಪುರದಲ್ಲಿ ಶ್ರೀದುರ್ಗಾ ಮಾತೆ ಪ್ರತಿಷ್ಠಾಪಿಸಿ ಶರನ್ನವರಾತ್ರಿ ಮಹೋತ್ಸವ ಆರಂಭಿಸಲಾಗಿದೆ. 9 ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ್ಜತೆಗೆ ಹೋಮ, ಹವನಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಶ್ರೀ ದುರ್ಗಾ ಸೇವಾ ಸಮಿತಿ, ನಂದಿ ಟ್ರಸ್ಟ್ ನಿಂದ 21ನೇ ವರ್ಷದ ನವರಾತ್ರಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅ.22ರಂದು ಚಂಡಿಕಾ ಹೋಮ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಅ.24ರಂದು ಮಂಗಳವಾರ ಸಂಜೆ 4 ಗಂಟೆಗೆ ಶ್ರೀ ದುರ್ಗಾ ಮಾತೆಯನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ಮಂಗಳವಾದ್ಯದೊಂದಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ ಇಂದಾವರ ಕೆರೆಯಲ್ಲಿ ಶ್ರೀಮಾತೆಯನ್ನು ವಿಸರ್ಜಿಸಲಾಗುವುದು ಎಂದು ವಿವರಿಸಿದರು.
ಶ್ರೀದುರ್ಗಾದೇವಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಅ. 21ರಂದು ಅಂತರ್ ಜಿಲ್ಲಾ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ ಎಂದು ಶ್ರೀ ವಿಜಯಪುರ ದುರ್ಗಾ ಸೇವಾ ಸಮಿತಿ ನಂದಿ ಟ್ರಸ್ಟ್ ಗೌರವಾಧ್ಯಕ್ಷ ಅನಿಲ್ ತಿಳಿಸಿದರು. ಯುವಜನತೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ 15 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದವರಿಗೆ 10 ಸಾವಿರ ರೂಪಾಯಿ ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದವರಿಗೆ 5 ಸಾವಿರ ರೂ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ಧನಂಜಯ್(7795507610) ಕಿರಣ್(6361568948) ಸಂಪರ್ಕಿಸಬಹುದು.