

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇಗುಲದ ಆವರಣದ ದುರ್ಗಾಮಂಟಪದಲ್ಲಿ 14ನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅ.15ರಿಂದ 24ರವರೆಗೆ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ ತಿಳಿಸಿದರು.
ಹತ್ತು ದಿನಗಳ ಪರ್ಯಂತ ಲೋಕಕಲ್ಯಾಣಾರ್ಥ ಶ್ರೀದೇವಿಗೆ ತ್ರಿಕಾಲ ಪೂಜೆ, ಸಪ್ತಶತೀ ಪಾರಾಯಣ ನೆರವೇರಿಸಲಾಗುವುದು. ಪ್ರತಿನಿತ್ಯ ರಾತ್ರಿ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಧರ್ಮಾವಲಂಬಿತ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿನಿತ್ಯ ಮಧ್ಯಾಹ್ನ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ವಿಜಯದಶಮಿ ದಿನ ಹದಿನೈದು ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಅ.15ರಂದು ಬೆಳಗ್ಗೆ ದುರ್ಗಾದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಬಿ.ಗಿರಿಜಾಶಂಕರ ಜೋಷಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಕಾರ್ಯಾಧ್ಯಕ್ಷ ವೈ.ಮೋಹನ್‌ಕುಮಾರ್ ಮಾತನಾಡಿ, ಅ.23ರಂದು ಜನಜಾಗೃತಿ ಧರ್ಮಸಭೆ ನಡೆಯಲಿದ್ದು, ತಾಳಿಕೋಟೆ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತೆ ಡಾ. ಬಿ.ಮಂಜಮ್ಮ ಜೋಗತಿ ಅವರಿಗೆ ದುರ್ಗಾದೇವಿ ಶ್ರೀರಕ್ಷೆ ನೀಡಲಾಗುವುದು. ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಭಾಗವಹಿಸಲಿದ್ದಾರೆ. 24ರಂದು ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನ ದುರ್ಗಾದೇವಿ ಶೋಭಾಯಾತ್ರೆಯು ವಿವಿಧ ಕಲಾತಂಡಗಳೊಂದಿಗೆ ನಡೆದು ಭದ್ರಾ ನದಿಯಲ್ಲಿ ದುರ್ಗಾ ವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ನವರಾತ್ರಿ ಮಹೋತ್ಸವದಲ್ಲಿ ವಿಶೇಷವಾಗಿ ಹೂವಿನ ಪೂಜೆ, ಪಾರಾಯಣ, ಅಷ್ಟೋತ್ತರ, ಅಕ್ಷರಾಭ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಈ ಬಾರಿ ನಿತ್ಯ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ನಾಮಕರಣ ಮಾಡಿ ಕಲೆಯನ್ನು ಹೆಚ್ಚು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಕಡೆಯ ದಿನದ ಶೋಭಾಯಾತ್ರೆಯಲ್ಲಿ ರಾಜ್ಯ, ಹೊರ ರಾಜ್ಯದ ವಿವಿಧೆಡೆಯ ಕಲೆ, ಸಂಸ್ಕೃತಿ ಬಿಂಬಿಸುವ 20ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಸಮಿತಿ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್, ಪ್ರಸನ್ನ ಜಿ. ಭಟ್, ಶಿವರಾಮ ಶೆಟ್ಟಿ, ಚೈತನ್ಯ ವೆಂಕಿ, ಡಿ.ಎನ್.ಸುಧಾಕರ್, ಉಪೇಂದ್ರ ಆಚಾರ್ಯ, ದಯಾಕರ್, ಎಚ್.ಎಚ್.ಕೃಷ್ಣಮೂರ್ತಿ, ರಾ.ವೆಂಕಟೇಶ್, ಮನುಕುಮಾರ್, ಕೃಷ್ಣ ಭಟ್, ವಿದ್ಯಾ ಶೆಟ್ಟಿ, ಸುಂದರ್, ಈಶ್ವರ್ ಇಟ್ಟಿಗೆ, ಗಿರೀಶ್ ಇತರರಿದ್ದರು.