ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ದರ್ಬಾರ್

Private busus in KSRTC Stand
Published on

ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿಯ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾದ್ಯಂತ ನಿಗಮದ ಬಸ್‍ಗಳು ರಸ್ತೆಗಿಳಿಯಲಿಲ್ಲ. ಹಾಗಾಗಿ ಸರ್ಕಾರಿ ಬಸ್ ನಿಲ್ದಾಣದ ಪ್ಲಾಟ್‍ಫಾರ್ಮ್ ಗಳಲ್ಲಿ ಖಾಸಗಿ ಬಸ್‍ಗಳು ಹಾಗೂ ವಾಹನಗಳು ನಿಂತಿದ್ದವು. ಮುಷ್ಕರದ ಅರಿವಿಲ್ಲದೆ ನಾನಾ ಕೆಲಸ ಕಾರ್ಯಗಳಿಗಾಗಿ ವಿವಿಧೆಡೆಯಿಂದ ನಗರಕ್ಕೆ ಆಗಮಿಸಿದ್ದ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಮುಷ್ಕರದ ಬಿಸಿ  ಅನುಭವಿಸಬೇಕಾಯಿತು. ಜಿಲ್ಲಾಡಳಿತ ಖಾಸಗಿ ಬಸ್‍ಗಳು ಹಾಗೂ ಇತರ ವಾಹನಗಳ ವ್ಯವಸ್ಥೆ ಕಲ್ಪಿಸಿದ್ದರಿಂದ ನಿಗಮದ ನಿಲ್ದಾಣದ ತುಂಬ ಬೆಳಗ್ಗಿನಿಂದಲೇ ಖಾಸಗಿ ಬಸ್‍ಗಳು ಹಾಗೂ ವಾಹನಗಳೇ ತುಂಬಿದ್ದವು.

ಬೆಳಗ್ಗಿನಿಂದಲೇ ಖಾಸಗಿ ಬಸ್ ವ್ಯವಸ್ಥೆ:

ಮುಂಜಾನೆ 5 ಗಂಟೆಯಿಂದಲೇ ನಗರದ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಮತ್ತಿತರ ವಾಹನಗಳು ಸಂಚಾರ ಆರಂಭಿಸಿದ್ದವು. ಆರಂಭದಲ್ಲಿ ಹಲವು ಪ್ರಯಾಣಿಕರು ಹೊರಟಿದ್ದರಿಂದ ಕಡೂರು, ಹಾಸನ ಹಾಗೂ ಮೂಡಿಗೆರೆ ಭಾಗಗಳಿಗೆ ಹೆಚ್ಚು ವಾಹನಗಳು ಸಂಚರಿಸಿದವು. ಆದರೆ ಅತ್ತಿಂದಿತ್ತ ಬರುವ ಕಾಲಕ್ಕೆ ಸಾಕಷ್ಟು ಪ್ರಯಾಣಿಕರು ಇರದ ಕಾರಣ ವಾಹನಗಳು ಕಾದು ನಿಲ್ಲಬೇಕಾದ ಅನಿವಾರ್ಯತೆ ಉಂಟಾಯಿತು. ಸರ್ಕಾರಿ ಬಸ್‍ಗಳು ಸಂಚರಿಸುವ ಮಾರ್ಗಗಳಿಗೆ ಸುಮಾರು 115 ಖಾಸಗಿ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಯಾಣಿಕರ ಕೊರತೆ ಕಾಡುವ ಭೀತಿಯಲ್ಲಿ ದೂರದ ಊರುಗಳಿಗೆ ಬಸ್ ಮತ್ತಿತರ ವಾಹನಗಳ ಸಂಚಾರ ಕಡಿಮೆಯಾಗಿತ್ತು. ನಿಗಮದ ಬಸ್‍ಪಾಸ್ ಹೊಂದಿದ್ದ ವಿದ್ಯಾರ್ಥಿಗಳು ಹಾಗೂ ಇತರರು ಖಾಸಗಿ ವಾಹನಗಳಿಗೆ ಪ್ರಯಾಣ ಶುಲ್ಕ ಪಾವತಿಸಿಯೇ ಪ್ರಯಾಣಿಸಬೇಕಾಯಿತು.

ಪ್ರಯಾಣಿಕರಿಲ್ಲದ್ದು ತೊಡಕು:

ಕಡೂರು, ಹಾಸನ, ಮೂಡಿಗೆರೆ, ಬೇಲೂರು ಮತ್ತಿತರ ಕಡೆಗಳಿಗೆ ಸಾಕಷ್ಟು ಟ್ರಿಪ್ ವಾಹನಗಳು ಓಡಾಡಿದವು. ಬೆಂಗಳೂರು, ಧರ್ಮಸ್ಥಳ ಮತ್ತಿತರ ಕಡೆಗಳಿಗೆ ಮಧ್ಯಾಹ್ನ ಖಾಸಗಿ ಬಸ್ ಮತ್ತು ವಾಹನಗಳು ಸಂಚರಿಸಲು ಮುಂದಾಗಿದ್ದರೂ ಸಾಕಷ್ಟು ಪ್ರಯಾಣಿಕರಿಲ್ಲದೆ ಕಾದು ನಿಂತಿದ್ದವು. ಈ ನಡುವೆ ಕೆಲವು ವಾಹನಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲು ಮಾಡಿದ ಆರೋಪವೂ ಕೇಳಿಬಂತು. ಬಸ್ ಭರ್ತಿ ಆಗುವವರೆಗೆ ವಾಹನಗಳು ಕಾದು ನಿಲ್ಲುತ್ತಿದ್ದುದರಿಂದ ಕಾಯಲು ಸಾಧ್ಯವಾಗದೆ ಸಾಕಷ್ಟು ಜನರು ಆಟೋ, ಟ್ಯಾಕ್ಸಿಗಳು ಮತ್ತಿತರ ವಾಹನಗಳಿಗೆ ದುಬಾರಿ ದರ ತೆರುವ ಮೂಲಕ ಊರು ಸೇರಿಕೊಂಡರು.

ಲೈನ್ ಬಸ್‍ಗಳು ಅಬಾಧಿತ:

ಈ ನಡುವೆ ಲೈನ್‍ನಲ್ಲಿ ಸಂಚರಿಸುವ ಖಾಸಗಿ ಬಸ್‍ಗಳು ಎಂದಿನಂತೆ ಓಡಾಡಿದವು. ಜತೆಗೆ ಪ್ರಯಾಣಿಕರು ಸಹ ಪ್ರತಿದಿನದಂತೆ ಇದ್ದರು. ನಗರದಲ್ಲಿ ಸಹ ಖಾಸಗಿ ನಗರ ಸಾರಿಗೆ ಬಸ್‍ಗಳು ಓಡಾಡಿ ನಿಗಮದ ಸಿಟಿ ಬಸ್‍ಗಳ ಕೊರತೆಯನ್ನು ನೀಗಿಸಿದವು. ಪ್ರಯಾಣಿಕರಿಗೆ ಯಾವುದೆ ತೊಂದರೆಯಾಗದಂತೆ 100ಕ್ಕೂ ಅಧಿಕ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕಡೂರು, ಕಳಸ, ಕೊಪ್ಪ ಸೇರಿ ಮಲೆನಾಡಿನ ಎಲ್ಲ ಭಾಗದ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿ ಬಸ್‍ಗಳ ಸಂಖ್ಯೆ ಹೆಚ್ಚಿಸಲಾಗುವುದು. ಹೆಚ್ಚಿನ ಪ್ರಯಾಣ ದರ ವಿಧಿಸದೆ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಚಿಕ್ಕಮಗಳೂರು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ತಿಳಿಸಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘದ ಕಾರ್ಯದರ್ಶಿ ಷಣ್ಮುಖ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿರುವ ಬಸ್‍ಗಳನ್ನು ಹೊರತುಪಡಿಸಿ ಚಿಕ್ಕಮಗಳೂರು ನಗರ ಕೇಂದ್ರದಿಂದ ಕಡೂರು, ತರೀಕೆರೆ, ಶೃಂಗೇರಿ, ಕೊಪ್ಪ, ಕಳಸ ಭಾಗಗಳಿಗೆ 20 ರಿಂದ 25 ಬಸ್‍ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದರು.

ನಿಷೇಧಾಜ್ಞೆ ಜಾರಿ:

ಸಾರಿಗೆ ನಿಗಮದ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಮುಷ್ಕರದ ಸಂದರ್ಭ ನಿಗಮದ ಆಸ್ತಿ-ಪಾಸ್ತಿ, ವಾಹನಗಳಿಗೆ ಸಂಭಾವ್ಯ ಹಾನಿ ತಡೆಯಲು, ಪ್ರಯಾಣಿಕರಿಗೆ ಅನನುಕೂಲ ಉಂಟಾಗದಂತೆ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಶಾಂತಿಭಂಗ ಆಗದಂತೆ ಬುಧವಾರ ಬೆಳಗ್ಗೆ 6ರಿಂದ ಮುಂದಿನ ಆದೇಶದವರೆಗೆ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ತರೀಕೆರೆ, ಕಡೂರು, ಅಜ್ಜಂಪುರ ಬಸ್ ನಿಲ್ದಾಣಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net